ಬೆಂಗಳೂರು: ಇತ್ತೀಚೆಗೆ ಯಲಹಂಕದಲ್ಲಿ ಮುಗಿದ ಏರ್ ಶೋನಲ್ಲಿ ಕನ್ನಡಕ್ಕೆ ಅವಮಾನ ಆಗಿದೆ ಎಂದು ಕನ್ನಡ ರಕ್ಷಣಾ ವೇದಿಕೆಯ ಮುಖ್ಯಸ್ಥ ಪ್ರವೀಣ್ ಶೆಟ್ಟಿ ಆರೋಪಿಸಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಅಮಿತ್ ಶಾ ಪಾಲ್ಗೊಂಡ ಕಾರ್ಯಕ್ರಮದಲ್ಲಿ ಕನ್ನಡ ಮಾಯವಾಗಿತ್ತು. ನಮ್ಮ ಗಡಿ ಪ್ರದೇಶದ ರಾಜಕಾರಣಿಗಳು ಕನ್ನಡವನ್ನೇ ಮರೆತಿದ್ದಾರೆ. ಮರಾಠಿ ಭಾಷೆಯಲ್ಲೇ ವ್ಯವಹರಿಸುತ್ತಾರೆ. ಗಣ್ಯರು ಡೆಲ್ಲಿ ಅಥವಾ ವಿದೇಶದಿಂದಾದರೂ ಬರಲಿ ಆದರೆ ಕನ್ನಡ ಕಡ್ಡಾಯ ಇರಲಿ ಎಂದಿದ್ದಾರೆ.
ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಕನ್ನಡಕ್ಕಾಗಿ ಹೋರಾಡಿದರೆ ದೇಶದ್ರೋಹಿ ಪಟ್ಟ ಕಟ್ಟಲಾಗುತ್ತಿದೆ. ದೇಶದ್ರೋಹದ ಕೇಸು ಹಾಕಿ ಬಂಧಿಸಿದ ಘಟನೆಯೂ ನಡೆದಿದೆ. ಕನ್ನಡ ನಿರ್ಲಕ್ಷ್ಯವಾದರೆ ಮುಖ್ಯಮಂತ್ರಿಗಳು ಕಣ್ಣುಕಟ್ಟಿ ಕುಳಿತುಕೊಳ್ಳಬಾರದು. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಪದೇ ಪದೇ ಗಡಿ ಕ್ಯಾತೆ ತೆಗೆಯುತ್ತಿದ್ದಾರೆ, ಆದರೆ ಕರ್ನಾಟಕದ ಒಂದು ಹಿಡಿ ಮಣ್ಣು ಅವರಿಗೆ ಸಿಗುವುದಿಲ್ಲ ಎನ್ನೋದು ಗೊತ್ತಿರಲಿ ಎಂದು ಎಚ್ಚರಿಸಿದ್ದಾರೆ.
ಗಡಿಯ ವಿಚಾರಕ್ಕೆ ಬಂದರೆ ತಕ್ಕ ಪಾಠ ಕಲಿಸುತ್ತೇವೆ. ಲಾಠಿಯೇಟು, ಜೈಲು ನಾವು ನೋಡಿಯಾಗಿದೆ. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಮಹಾರಾಷ್ಟ್ರ ಚಲೋ ಹಮ್ಮಿಕೊಳ್ತೇವೆ. ಹೋರಾಟದ ರೂಪುರೇಷೆಯನ್ನು ಸಿದ್ಧಪಡಿಸಿ ಘೋಷಿಸುತ್ತಿದ್ದೇವೆ. ರೈತರ ಹೋರಾಟಕ್ಕೆ ಯಾವತ್ತೂ ನಮ್ಮ ನೈತಿಕ ಬೆಂಬಲಿವಿದೆ ಎಂದೂ ಪ್ರವೀಣ್ ಶೆಟ್ಟಿ ಹೇಳಿದ್ದಾರೆ.