ಉಡುಪಿ: ತುಳುನಾಡ ಜನರು ದೇವರ ಹರಕೆಯಾದರೂ ಬಾಕಿ ಇಟ್ಟಾರು.., ಆದ್ರೆ ಪಿತೃಗಳ ಆರಾಧನೆಯಲ್ಲಿ ಯಾವುದೇ ಅಪಚಾರ ಮಾಡೋದಿಲ್ಲ. ಕುಟುಂಬದ ಹಿರಿಯರು ಮೃತಪಟ್ಟಾಗ, ಅವರ ಆತ್ಮ ಅಷ್ಟೊಂದು ಸುಲಭದಲ್ಲಿ ಮನೆ ಬಿಟ್ಟು ಹೋಗಲು ಒಪ್ಪೋದಿಲ್ಲ. ಆಗ ಸ್ವತಃ ಬಂಟ ದೈವಗಳೇ ಬಂದು ಆ ಆತ್ಮಗಳಿಗೆ ಪಿತೃ ಸ್ಥಾನ ಕೊಡಿಸುವ ಅಪರೂಪದ ಆಚರಣೆಯೊಂದು ಕರಾವಳಿಯಲ್ಲಿದೆ. ಅದುವೇ ‘ಕಾಲೆಕೋಲ’.
ಬದುಕಿದ್ದಾಗ ಹಿರಿಯರಿಗೆ ಗೌರವ ಕೊಡೋದು ನಮ್ಮ ಸಂಸ್ಕಾರ. ಅವರ ನಿಧನದ ನಂತರವೂ ಅವರ ಆತ್ಮಗಳಿಗೆ ಸದ್ಗತಿ ಕೊಡಿಸುವುದು ನಮ್ಮ ಸಂಸ್ಕೃತಿ. ದೇಹದಿಂದ ಆತ್ಮ ದೂರವಾದರೂ ಮನೆ ಮತ್ತು ಕುಟುಂಬದ ಮೇಲಿನ ಮೋಹ ಹೋಗೋದಿಲ್ವಂತೆ. ಇಲ್ಲಿ ಕಾಣಿಸುತ್ತಿರುವ ಈ ಕಪ್ಪು ಮೈ ಬಣ್ಣದ ವೇಷಧಾರಿ ಆ ಮೋಹದ ಸಂಕೇತ. ಹೌದು, ಕರಾವಳಿಯ ಮನೆತನಗಳಲ್ಲಿ ಕುಟುಂಬದ ಹಿರಿಯರು ಮೃತಪಟ್ಟಾಗ, ಈ ಅಪರೂಪದ ಆಚರಣೆ ನಡೆಯುತ್ತೆ. ಅಪರಕ್ರಿಯೆಯ ದಿನ ಮೋಹಕ್ಕೊಳಗಾದ ಪ್ರೇತಾತ್ಮವನ್ನು ಮನೆ ಪಕ್ಕದ ಸಮಾಧಿಗೆ ಕೊಂಡೊಯ್ಯಲು ಸ್ವತಃ ಬಂಟ ದೈವಗಳು ಧರೆಗಿಳಿದು ಬರುತ್ತವೆ. ಬಾಳಿ ಬದುಕಿದ ಮನೆಯನ್ನು ಬಿಟ್ಟು ಹೋಗಲು ಪ್ರೇತಾತ್ಮ ಅನುಭವಿಸುವ ಸಂಕಟ, ವೇದನೆಗಳೆಲ್ಲವೂ ಇಲ್ಲಿ ನರ್ತನ ರೂಪದಲ್ಲಿ ಕಾಣಬಹುದು. ಮನೆಯ ಪ್ರತಿಯೊಬ್ಬರನ್ನೂ ನೆನೆದು, ಹಾರೈಸಿ ಪ್ರೇತಾತ್ಮ ಮನೆಯಿಂದ ಬೀಳ್ಕೊಡುವ ಗಳಿಗೆ ನಿಜಕ್ಕೂ ಭಾವನಾತ್ಮಕವಾಗಿರುತ್ತದೆ. ದೈವಗಳ ಆರಾಧನೆಯ ಸ್ವರೂಪದಲ್ಲಿ ಕಾಲೆಕೋಲವಾಗಿ ಈ ಅಪರಕ್ರಿಯೆ ನಡೆಯುತ್ತದೆ. ಅಂದಹಾಗೆ ಈ ಆಚರಣೆ ನಡೆದಿದ್ದು, ಉಡುಪಿ ಜಿಲ್ಲೆಯ ಉಪ್ಪೂರು ಸಮೀಪದ ಉಗ್ಗೇಲುಬೆಟ್ಟಿನಲ್ಲಿ. ತಮ್ಮ ಮನೆಯ ಹಿರಿಯಜ್ಜಿ ನಿಧನರಾದಾಗ ಕುಟುಂಬಿಕರು ಈ ಕಾಲೆಕೋಲವನ್ನು ಮಾಡಿಸಿದ್ದಾರೆ.