ಉಡುಪಿ:ಕಾಗಿನೆಲೆ ನಿರಂಜನಾನಂದ ಸ್ವಾಮೀಜಿ ಮತ್ತು ಹೊಸದುರ್ಗದ ಈಶ್ವರಾನಂದಪುರಿ ಸ್ವಾಮೀಜಿಗಳು ಕುರುಬ ಸಮುದಾಯಕ್ಕೆ ಮೀಸಲಾತಿ ಆಗಬೇಕು ಎಂಬ ಹೋರಾಟ ಆರಂಭಿಸಿದ್ದಾರೆ. ಇಬ್ಬರು ಶ್ರೀಗಳು ಕೂಡ ಸಿದ್ದರಾಮಯ್ಯನವರ ಮನೆಗೆ ಮೊದಲು ಭೇಟಿ ಕೊಟ್ಟಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಇದನ್ನು ನಾನು ಹೇಳುತ್ತಿಲ್ಲ ಸ್ವತಃ ಸ್ವಾಮೀಜಿಗಳ ಹೇಳಿದ್ದಾರೆ. ಸಿದ್ದರಾಮಯ್ಯನ ಮನೆಗೆ ಭೇಟಿ ಕೊಟ್ಟ ನಂತರ ನಮ್ಮ ಮನೆಗೆ ಬಂದಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.
ನಾನು ಹೋರಾಟಕ್ಕೆ ಬರುವುದಿಲ್ಲ ಬೆಂಬಲ ಕೊಡುತ್ತೇನೆ ಎಂದು ಸಿದ್ದರಾಮಯ್ಯ ಒಪ್ಪಿಕೊಂಡಿದ್ದರು. ಮೂರು ಪಕ್ಷದ ನಾಯಕರು ಸೇರಿಕೊಂಡು ಸ್ವಾಮೀಜಿ ನೇತೃತ್ವದಲ್ಲಿ ಸಮಿತಿ ರಚನೆಯಾಯಿತು. ಈಗ ಸಿದ್ದರಾಮಯ್ಯ ವರಸೆ ಬದಲಿಸಿದ್ದಾರೆ, ನನಗೆ ಕರೆದೇ ಇಲ್ಲ, ನನ್ನನ್ನು ಕೇಳಿಯೇ ಇಲ್ಲ ಎಂದು ಹೇಳುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ ಏನು ಹೇಳಿದರೂ ಪರವಾಗಿಲ್ಲ, ರಾಜ್ಯಾದ್ಯಂತ ಜನಜಾಗೃತಿ ಆಗ್ತಾಯಿದೆ. ನಾವು ಕೇಂದ್ರದ ನಾಯಕರನ್ನು ಭೇಟಿಯಾಗಿದ್ದೇವೆ. ಜನವರಿ 15ರಿಂದ ರಾಜ್ಯಾದ್ಯಂತ 340 ಕಿಲೋ ಮೀಟರ್ ಪಾದಯಾತ್ರೆ ಶುರುವಾಗಲಿದೆ. ಫೆಬ್ರವರಿ 7 ರಂದು ಬೆಂಗಳೂರಿನಲ್ಲಿ 10 ಲಕ್ಷ ಕುರುಬರು ಸೇರಿ ಸಮಾವೇಶ ನಡೆಸುತ್ತೇವೆ. ಸ್ವಾಮೀಜಿಗಳು ಏನು ಮಾರ್ಗದರ್ಶನ ಮಾಡುತ್ತಾರೆ ಆ ಮೂಲಕ ಹೋರಾಟ ಮುಂದುವರಿಯುತ್ತದೆ ಎಂದು ಹೇಳಿದರು.