ಉಡುಪಿ/ಕಾಪು:ಶಿರ್ವ ವ್ಯಾಪ್ತಿಯಲ್ಲಿನ ವಿವಿಧ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಪು ಪೊಲೀಸರು ನಾಲ್ವರು ಅಂತರ್ ಜಿಲ್ಲಾ ಕಳ್ಳರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಮುದ್ದೇಬಿಹಾಳ ನಿವಾಸಿ ರಮೇಶ್ ವಡ್ಡೇರ್ (30), ಬಾಗಲಕೋಟೆ ಜಿಲ್ಲೆ ಬಿಲ್ಕೆನೂರು ನಿವಾಸಿ ವಿಜಯ ಹುಲಗಪ್ಪ ವಡ್ಡರ್ (30) ಗೋವಾ ನಿವಾಸಿ ನೂರ್ ಮಹಮ್ಮದ್ ಶೇಖ್ (46) ಮತ್ತು ಶಿವಮೊಗ್ಗ ಜಿಲ್ಲೆ ಶೃಂಗೇರಿ ಬೆಳಂದೂರು ನಿವಾಸಿ ರವಿ (33) ಎಂದು ಗುರುತಿಸಲಾಗಿದೆ.
ಈ ಆರೋಪಿಗಳು ಫೆಬ್ರವರಿ 4 ರಂದು ಮಣಿಪುರ ಗ್ರಾಮದ ದೆಂದೂರುಕಟ್ಟೆಯ ಮನೋಜ್ ಬಾರ್ ಆ್ಯಂಡ್ ರೆಸ್ಟೋರೆಂಟ್ ನ ಕ್ಯಾಶ್ ಕೌಂಟರ್ ನಲ್ಲಿದ್ದ 10,000 ನಗದು ಕಳ್ಳತನ ಮಾಡಿಕೊಂಡು ಹೋಗಿದ್ದರು. ಜೊತೆಗೆ ಆರೋಪಿಗಳು ಕೃತ್ಯ ನಡೆಸಿದ ಬಗ್ಗೆ ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಸಿಸಿ ಕ್ಯಾಮರಾದ ಡಿವಿಆರ್ ಅನ್ನು ಕಳವು ಮಾಡಿದ್ದರು.
ಇವರ ವಿರುದ್ಧ ಶಿರ್ವ ಠಾಣಾ ವ್ಯಾಪ್ತಿಯಲ್ಲಿ 2 ಪ್ರಕರಣ ಹಾಗೂ ಇತರ ಕಡೆಗಳಲ್ಲಿ ಬಾರ್ ಗಳಲ್ಲಿ ಹಣ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಅದರಂತೆ ಮಾರ್ಚ್ 15 ರಂದು ರಾತ್ರಿ 2.15 ರ ಸುಮಾರಿಗೆ ಕಟಪಾಡಿ ಜಂಕ್ಷನ್ ಬಳಿ ಕಾಪು ಠಾಣೆಯ ಕ್ರೈಂ ಪಿಎಸ್ ಐ ಯೂನೂಸ್ ಗಡ್ಡೇಕರ್ ಹಾಗೂ ಸಿಬಂದಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಮಾರುತಿ ಕಾರಿನಲ್ಲಿ ಬಂದಿರುವ ನಾಲ್ವರು ವ್ಯಕ್ತಿಗಳ ಮೇಲೆ ಅನುಮಾನಗೊಂಡು ತಪಾಸಣೆ ನಡೆಸಿದಾಗ ಅವರ ಬಳಿ ಕಬ್ಬಿಣದ ರಾಡ್ ಪತ್ತೆಯಾಗಿತ್ತು. ಆರೋಪಿಗಳನ್ನು ಪೊಲೀಸರು ಕೂಲಂಕಷವಾಗಿ ವಿಚಾರಣೆ ನಡೆಸಿದಾಗ ಬಾರ್ನಲ್ಲಿ ಕಳ್ಳತನ ಮಾಡಿಕೊಂಡು ಬಂದಿರುವುದನ್ನು ಒಪ್ಪಿಕೊಂಡಿದ್ದಾರೆ. ಶಿರ್ವದ ಬಂಟಕಲ್, ಕುರ್ಕಾಲುನಲ್ಲಿ ಬಾರ್ ಗಳ ಬಾಗಿಲು ಮುರಿದು ಹಣ ಕಳ್ಳತನ ಮಾಡಿದ ಬಗ್ಗೆಯೂ ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಅಲ್ಲದೇ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ಒಟ್ಟು 16 ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ದೊರೆತಿದೆ.
ಬಂಧಿತ ಆರೋಪಿಗಳು ಶಿರ್ವ ಠಾಣಾ ವ್ಯಾಪ್ತಿಯಲ್ಲಿ ಕಲ್ಲುಕೋರೆಗಳಲ್ಲಿ ಕೆಲಸ ಮಾಡಿಕೊಂಡಿದ್ದು, ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಕಳ್ಳತನ ಮಾಡುತ್ತಿದ್ದರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಾರ್ಚ್ 27ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬಂಧಿತರಿಂದ 40,000 ಮೌಲ್ಯದ ಮಾರುತಿ 800 ಕಾರು, ರೂ 20,000 ಮೌಲ್ಯದ ಮೋಟಾರ್ ಸೈಕಲ್, ರೂ 16,000 ಮೌಲ್ಯದ 4 ಮೊಬೈಲ್ ಫೋನ್ ಗಳು, 5,000 ರೂ. ಮೌಲ್ಯದ ಡಿವಿಆರ್, ಬ್ಯಾಟರಿ, ಸ್ವಿಚ್ ಅನ್ನು ವಶಪಡಿಸಿಕೊಳ್ಳಲಾಗಿದೆ.