ಉಡುಪಿ: ಸಮಸ್ಯೆಗಳಿಗೆ ಸಶಸ್ತ್ರ ಹೋರಾಟವೇ ಪರಿಹಾರ ಎಂದು ನಕ್ಸಲರು ಈ ಗ್ರಾಮದಲ್ಲಿ ತಮ್ಮ ಚಟುವಟಿಕೆ ಆರಂಭಿಸಿದ್ದರು.ಆದರೆ, ಸ್ವಾವಲಂಬನೆಯೇ ಪರಿಹಾರ ಎಂದು ಅಲ್ಲಿನ ಗ್ರಾಮಸ್ಥರು ತೋರಿಸಿಕೊಟ್ಟಿದ್ದಾರೆ.
ಉಡುಪಿ ಜಿಲ್ಲೆಯ ಅಮಾಸೆಬೈಲು ಎಂಬ ನಕ್ಸಲ್ ಪೀಡಿತ ಗ್ರಾಮ ಈಗ ಇತರ ಗ್ರಾಮಗಳಿಗೆ ಮಾದರಿಯಾಗಿದೆ. ಅಮಾಸೆಬೈಲು ಚಾರಿಟಬಲ್ ಟ್ರಸ್ಟ್ ಕಂಡ ಕನಸು ನನಸಾಗಿದ್ದು, ಈ ಗ್ರಾಮ ಈಗ ಸಂಪೂರ್ಣ ಸೋಲಾರ್ ಗ್ರಾಮವಾಗಿದೆ.
ಹಳ್ಳಿಗರು ಮನಸು ಮಾಡಿದರೆ ಏನು ಬೇಕಾದರೂ ಸಾಧಿಸಬಲ್ಲರು ಅನ್ನೋದಕ್ಕೆ ಇದು ಸಾಕ್ಷಿ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಮಾಸೆಬೈಲು ಒಂದು ನಕ್ಸಲ್ ಪೀಡಿತ ಗ್ರಾಮವಾಗಿತ್ತು. ಹಾಗಂತ ಅಲ್ಲಿನ ಜನರು ಈಗ ನಕ್ಸಲರು ಎಂದು ಕರೆಸಿಕೊಳ್ಳೋದಕ್ಕೆ ಬಯಸೋದಿಲ್ಲ. ಪ್ರಕೃತಿಯನ್ನು ಅವಲಂಬಿಸಿ ಅಭಿವೃದ್ಧಿಯ ಕನಸು ಕಂಡ ಈ ಹಳ್ಳಿ ಈಗ ಸಂಪೂರ್ಣ ಸೋಲಾರ್ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಅಮಾಸೆಬೈಲು ಈಗ ಸಂಪೂರ್ಣ ಸೋಲಾರ್ ಹಳ್ಳಿ ಈ ಕನಸು ನನಸು ಮಾಡಿದ್ದು, ಅಮಾಸೆಬೈಲು ಚಾರಿಟಬಲ್ ಟ್ರಸ್ಟ್. ರಾಜಕೀಯದಲ್ಲಿ ವಿವಿಧ ಹುದ್ದೆ ಅನುಭವಿಸಿ, ಸದ್ಯ ರಾಜಕಾರಣದಿಂದ ನಿವೃತ್ತರಾಗಿರುವ ಹಿರಿಯ ನಾಯಕ ಎ.ಜಿ.ಕೊಡ್ಗಿ ಈ ಟ್ರಸ್ಟ್ ನ ಮುಖ್ಯಸ್ಥರು. ಇವರೊಬ್ಬ ಅಪರೂಪದ ರಾಜಕಾರಣಿ. ಕಾಡುಗುಡ್ಡ ಪರಿಸರದ ಮಡಿಲಲ್ಲಿರುವ ಈ ಗ್ರಾಮದ ಎಲ್ಲ ಮನೆಗಳು ಈಗ ಸೋಲಾರ್ ಅಳವಡಿಸಿಕೊಂಡಿವೆ. ಮೂರು ಹಂತಗಳಲ್ಲಿ ಸುಮಾರು ಒಂದೂವರೆ ಸಾವಿರ ಮನೆಗಳಿಗೆ ಸೋಲಾರ್ ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ. ಈ ಕ್ರಾಂತಿಕಾರಿ ಸಾಧನೆಯಿಂದ 1800 ಕುಟುಂಬಗಳಿಗೆ ಸೋಲಾರ್ ದೀಪ ಮತ್ತು 27 ಸೋಲಾರ್ ದಾರಿದೀಪಗಳನ್ನು ಅಳವಡಿಸಲಾಗಿದೆ.
ಗ್ರಾಮೀಣ ಕರ್ನಾಟಕದಲ್ಲಿ ವಿದ್ಯುತ್ ನದ್ದೇ ಸಮಸ್ಯೆ. ಈ ಕಣ್ಣಾ ಮುಚ್ಚಾಲೆಯಿಂದ ರೋಸಿ ಹೋಗಿ ಎಲ್ಲ ಗ್ರಾಮಸ್ಥರು ಈ ಯೋಜನೆಗೆ ಕೈ ಜೋಡಿಸಿದ್ದಾರೆ. ಮಾಗ್ಸೆಸ್ಸೆ ಪ್ರಶಸ್ತಿ ಪಡೆದ ಹರೀಶ್ ಹಂದೆ ಅವರ ನೇತೃತ್ವದ ಸೆಲ್ಕೋ ಸಂಸ್ಥೆ ಸಾಮಾನ್ಯ ದರದಲ್ಲಿ ಸೋಲಾರ್ ಯಂತ್ರಗಳನ್ನು ವ್ಯವಸ್ಥೆ ಮಾಡಿದೆ. ಪ್ರತಿಯೊಬ್ಬ ಗ್ರಾಮಸ್ಥ ಒಂದು ನಿಗದಿತ ಮೊತ್ತವನ್ನು ನೀಡಿದರೆ ಉಳಿದ ಶೇ. 75 ರಷ್ಟು ಹಣವನ್ನು ಜಿಲ್ಲಾಡಳಿತ ಭರಿಸುತ್ತೆ. ಇದಕ್ಕೆ ಎಂ.ಎನ್. ಆರ್. ಇ ಮತ್ತು ಕ್ರೆಡಲ್ ಮುಂತಾದ ಸಂಸ್ಥೆಗಳು ಕೈ ಜೋಡಿಸಿವೆ.