ಉಡುಪಿ:ಕರಾವಳಿಯಲ್ಲಿ ಕಡಲಯುದ್ಧ ಆರಂಭವಾಗಿದ್ದು, ನೆರೆ ರಾಜ್ಯಗಳಾದ ತಮಿಳುನಾಡು ಮತ್ತು ಕೇರಳ ಮೀನುಗಾರರ ರೌಡಿಸಂ ಜೋರಾಗಿದೆ. ನಡು ಸಮುದ್ರದಲ್ಲಿ ಕಾನೂನುಬಾಹಿರ ಮೀನುಗಾರಿಕೆ ನಡೆಸುವ ಅನ್ಯ ರಾಜ್ಯದ ಮೀನುಗಾರರನ್ನು ಮಲ್ಪೆಯ ಮೀನುಗಾರರು ಹೆಡೆಮುರಿ ಕಟ್ಟಿದ್ದಾರೆ.
ಕರಾವಳಿಯಲ್ಲಿ ಕಡಲಯುದ್ಧ: ಅನ್ಯರಾಜ್ಯದ ಬೋಟ್ಗಳಿಗೆ ಲಗಾಮು ಹಾಕಿದ ಮಲ್ಪೆ ಮೀನುಗಾರರು... ಉಡುಪಿಯ ಮಲ್ಪೆ ಮೀನುಗಾರಿಕಾ ಬಂದರು ಇವತ್ತು ಮೀನುಗಾರರ ದಂಗೆಗೆ ಸಾಕ್ಷಿಯಾಯಿತು. ಕೋಟ್ಯಾಂತರ ರೂಪಾಯಿ ನಷ್ಟವನ್ನು ಲೆಕ್ಕಿಸದೆ ನೂರಾರು ಮೀನುಗಾರರು ಕಡಲಿನಿಂದ ವಾಪಸಾಗಿದ್ದಾರೆ. ಇಷ್ಟಕ್ಕೆಲ್ಲ ಕಾರಣವಾಗಿದ್ದು, ಒಂದು ಬೋಟ್. ಕಡು ನೀಲಿ ಬಣ್ಣದ, ಭಾರಿಗಾತ್ರದ ಈ ಬೋಟ್ ತಮಿಳುನಾಡಿನ ಮೀನುಗಾರರಿಗೆ ಸೇರಿದ್ದು.
ಕರ್ನಾಟಕ ಕರಾವಳಿ ಭಾಗದಲ್ಲಿ ತಮಿಳುನಾಡು ಮತ್ತು ಕೇರಳ ಮೀನುಗಾರರ ಕಾನೂನುಬಾಹಿರ ಮೀನುಗಾರಿಕೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದೆ. ಇಂದು ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದವರಿಗೆ ಸಮುದ್ರ ಮಧ್ಯದಲ್ಲಿ ಶಾಕ್ ಕಾದಿತ್ತು. ತಮಿಳುನಾಡು ಮತ್ತು ಕೇರಳದ ಹತ್ತಾರು ಬೋಟುಗಳು ಕಾನೂನು ಬಾಹಿರವಾಗಿ ಲೈಟ್ ಅಳವಡಿಸಿಕೊಂಡು ಮೀನುಗಾರಿಕೆ ನಡೆಸುತ್ತಿದ್ದವು. ಇದನ್ನು ವಿರೋಧಿಸಿದಾಗ ತಮಿಳುನಾಡಿನ ಮೀನುಗಾರರು ಮಲ್ಪೆಯ ಬೋಟುಗಳಿಗೆ ಡಿಕ್ಕಿ ಹೊಡೆದು ಆಯುಧಗಳಿಂದ ಹಲ್ಲೆಗೆ ಮುಂದಾದರು. ಇದರಿಂದ ಕೋಪಗೊಂಡ ಮೀನುಗಾರರು ಹತ್ತಾರು ಸಂಖ್ಯೆಯಲ್ಲಿ ಸುತ್ತುವರಿದು ತಮಿಳುನಾಡು ಮೀನುಗಾರರ ಬೋಟನ್ನು ಹೆಡೆಮುರಿ ಕಟ್ಟಿ ಮಲ್ಪೆಗೆ ಎಳೆದು ತಂದಿದ್ದಾರೆ.
ಮೀನುಗಾರರ ಈ ಕೋಪಕ್ಕೆ ಪ್ರಮುಖ ಕಾರಣವೂ ಇದೆ. ಇತ್ತೀಚೆಗೆ ಅನ್ಯ ರಾಜ್ಯಗಳ ಗಡಿಗೆ ಹೋಗಿದ್ದ ಸ್ಥಳೀಯ ಮೀನುಗಾರರಿಗೆ ಹಲ್ಲೆ ನಡೆಸಿದ್ದೂ ಅಲ್ಲದೆ ಲಕ್ಷಾಂತರ ರೂಪಾಯಿ ದಂಡ ಹಾಕಿದ್ದರು. ಕರ್ನಾಟಕ ಕರಾವಳಿಯಲ್ಲಿ ಕಾನೂನು ಬಾಹಿರವಾಗಿ ಲೈಟ್ ಅಳವಡಿಸಿ ಮೀನುಗಾರಿಕೆ ನಡೆಸಲಾಗುತ್ತಿದೆ. ಇದನ್ನು ವಿರೋಧಿಸಿದರೆ ರೌಡಿಸಂ ತೋರಿಸಲಾಗುತ್ತದೆ. ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಿರುವುದರಿಂದ ಮಲ್ಪೆಯ ಪರ್ಸೀನ್ ಬೋಟ್ ಮೀನುಗಾರರು ಇಂದು ರೊಚ್ಚಿಗೆದ್ದಿದ್ದರು. ಮಲ್ಪೆ ಬಂದರಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಮೀನುಗಾರರು ತಮಿಳುನಾಡಿನ ಬೋಟನ್ನು ಸುತ್ತುವರಿದು ಮುತ್ತಿಗೆ ಹಾಕಿದರು. ಸ್ಥಳಕ್ಕಾಗಮಿಸಿದ ಕರಾವಳಿ ಕಾವಲು ಪಡೆಯ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಲು ಹರಸಾಹಸ ಪಡುವಂತಾಯಿತು. ಹಾನಿಯಾದ ಮಲ್ಪೆಯ ಬೋಟಿಗೆ ಪರಿಹಾರ ನೀಡುವುದರ ಜೊತೆಗೆ ಅನ್ಯರಾಜ್ಯದ ಬೋಟುಗಳಿಗೆ ದಂಡ ಹಾಕುವಂತೆ ಮಲ್ಪೆಯ ಮೀನುಗಾರರು ಒತ್ತಾಯಿಸಿದ್ದಾರೆ.