ಉಡುಪಿ: ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದವನನ್ನು ಬಂಧಿಸಿದ ಹಿನ್ನೆಲೆಯಲ್ಲಿ ಕೆಲ ದುಷ್ಕರ್ಮಿಗಳು ಠಾಣೆ ಮೇಲೆ ಕಲ್ಲೆಸೆದು ದಾಂಧಲೆ ನಡೆಸಿರುವ ಘಟನೆ ಕುಂದಾಪುರದ ಕಂಡ್ಲೂರಿನಲ್ಲಿ ನಡೆದಿದೆ.
ಕುಂದಾಪುರ ಕಂಡ್ಲೂರು ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿ ಆಧರಿಸಿ ಮಾರುತಿ ಓಮ್ನಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದವನನ್ನು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಶ್ರೀಧರ ನಾಯ್ಕ್ ನೇತೃತ್ವದಲ್ಲಿ ಓಮ್ನಿ ಸಹಿತ ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.
ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಘಟನೆಯ ಬಗ್ಗೆ ಮಾಹಿತಿ ಪಡೆದ ಕೆಲ ದುಷ್ಕರ್ಮಿಗಳು ಠಾಣೆಯ ಮುಂಭಾಗದಲ್ಲಿ ಜಮಾಯಿಸಿ ಆರೋಪಿ ಹಾಗೂ ವಾಹನವನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ. ಆದರೆ ಎಸ್ಐ ಶ್ರೀಧರ ನಾಯ್ಕ್ ಪ್ರಕರಣ ದಾಖಲಿಸುವುದಾಗಿಯೂ, ಆರೋಪಿಯನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ದುಷ್ಕರ್ಮಿಗಳು ಠಾಣೆಯ ಛಾವಣಿಯ ಮೇಲೆ ಕಲ್ಲೆಸೆದಿದ್ದಾರೆ.
ಪೊಲೀಸರು ಠಾಣೆಯ ಮೇಲೆ ಕಲ್ಲು ತೂರಿದ ನಡೆಸಿದ ಆರೋಪಿಗಳನ್ನು ಬಂಧಿಸಲು ಯತ್ನಿಸಿದಾಗ ಒಬ್ಬ ಸಿಕ್ಕಿಬಿದ್ದಿದ್ದಾನೆ. ಉಳಿದವರು ಓಡಿ ಹೋಗಿದ್ದು, ನಾಲ್ಕು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಕಂಡ್ಲೂರು ಠಾಣೆಗೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.