ಕರ್ನಾಟಕ

karnataka

ETV Bharat / state

ಬೆಂಗಳೂರು ಗಲಭೆ ಪ್ರಕರಣ ಪೂರ್ವ ನಿಯೋಜಿತ ಕೃತ್ಯ: ಬಸವರಾಜ ಬೊಮ್ಮಾಯಿ

ಬೆಂಗಳೂರಿನ ಗಲಭೆಯು ಪೂರ್ವ ಯೋಜಿತ ಷಡ್ಯಂತ್ರವಾಗಿದ್ದು, ಕಾನೂನು ಸುವ್ಯವಸ್ಥೆ ಹದಗೆಡಿಸಲು ಪ್ರಯತ್ನ ಮಾಡಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

Home Minister Basavaraj Bommai
ಗೃಹ ಸಚಿವ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿ

By

Published : Aug 12, 2020, 3:34 PM IST

ಉಡುಪಿ:ಬೆಂಗಳೂರಿನ ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ವ್ಯಾಪ್ತಿಯಲ್ಲಿ ನಡೆದ ಗಲಭೆಯು, ಪೂರ್ವ ಯೋಜಿತ ಷಡ್ಯಂತ್ರ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ಈ ಕುರಿತು ಉಡುಪಿಯಲ್ಲಿ ಮಾತನಾಡಿದ ಅವರು, ಪುಂಡಾಟದ ಮೂಲಕ ಸಮಾಜ ಹದಗೆಡಿಸಲು ಹಲವು ಪ್ರಯತ್ನ ಮಾಡಿದ್ದು, ನಿಯಂತ್ರಣ ಸಂಪೂರ್ಣ ತಪ್ಪಿದಾಗ ಕೊನೆಯ ಅಸ್ತ್ರವಾಗಿ ಗೋಲಿಬಾರ್ ಮಾಡಲಾಗಿದೆ ಎಂದರು.

ಮೂರು ಜನ ಗೋಲಿಬಾರ್​​ನಲ್ಲಿ ಅಸುನೀಗಿದ್ದು, ಪೊಲೀಸರಿಗೂ ಕಲ್ಲು ತೂರಾಟದಲ್ಲಿ ಗಾಯಗಳಾಗಿವೆ. ಓರ್ವ ಪೊಲೀಸ್​​​​​ಗೆ ತಲೆಗೆ ಗಂಭೀರ ಗಾಯವಾಗಿದೆ. ಸದ್ಯ ಪರಿಸ್ಥಿತಿ ಹತೋಟಿಯಲ್ಲಿದ್ದು, ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂದು ಹೇಳಿದರು.

ಈಗಾಗಲೇ 110 ಜನ ಬಂಧನವಾಗಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡಲು ಪ್ರಥಮ ಆದ್ಯತೆ ನೀಡಲಾಗಿದ್ದು, ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡುತ್ತಿದ್ದೇವೆ ಎಂದರು. ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಗೃಹ ಕಾರ್ಯದರ್ಶಿಯವರ ಜತೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದರು.

ಈಗಾಗಲೇ ಗರುಡ ತಂಡ ಘಟನಾ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇನ್ನು, ಚೆನ್ನೈ, ಹೈದ್ರಾಬಾದ್ ನಿಂದ ತಲಾ ಮೂರು ಕೆಎಸ್ ಆರ್ ಪಿ ಕಂಪನಿಗಳು ಬರುತ್ತಿವೆ. ಅಲ್ಲದೇ, ರಾಪಿಡ್ ಆ್ಯಕ್ಷನ್ ಫೋರ್ಸ್ ಕೂಡ ಸ್ಥಳಕ್ಕೆ ಆಗಮಿಸಲಿದೆ ಎಂದು ಮಾಹಿತಿ ನೀಡಿದರು. ಎರಡು ಪ್ರದೇಶಗಳು ಸಂಪೂರ್ಣ ಪೊಲೀಸರ ಹತೋಟಿಯಲ್ಲಿವೆ ಎಂದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿ

ಇನ್ನೊಂದಿಷ್ಟು ಜನರ ಬಂಧನ ಆಗೋದು ಬಾಕಿ ಇದ್ದು, ಪುಂಡರ ಹಿಂದೆ ಯಾರಿದ್ದಾರೆ ಅನ್ನೋದನ್ನ ತನಿಖೆ ಮಾಡುತ್ತೇವೆ. ಸಿಎಂ ಬಿಎಸ್​ವೈ ಜೊತೆ ಬೆಳಿಗ್ಗೆ ಚರ್ಚೆ ಮಾಡಿದ್ದೇನೆ. ಮತ್ತೊಮ್ಮೆ ಸಿಎಂ ಮತ್ತು ಹಿರಿಯ ಅಧಿಕಾರಿ ಜೊತೆ ಮತ್ತೊಂದು ಸುತ್ತಿನ ಚರ್ಚೆ ಮಾಡುತ್ತೇನೆ. ಸಿಸಿ ಕ್ಯಾಮೆರಾ ದಾಖಲೆ ಹಾಗೂ ಪೊಲೀಸ್ ಠಾಣೆಯ ದಾಖಲೆ ಸಂಗ್ರಹಿಸುತ್ತೇವೆ ಎಂದರು.

ಪುಂಡಾಟಿಕೆಯಲ್ಲಿ ಮುಂಚೂಣಿಯಲ್ಲಿದ್ದವರ ಮಾಹಿತಿ ಸಂಗ್ರಹವಾಗುತ್ತಿದ್ದು, ಫೇಸ್​​​ಬುಕ್​​​ನಲ್ಲಿ ಚರ್ಚೆ ಮಾಡಿ ಕರೆ ಕೊಟ್ಟಿದ್ದಾರೆ. ಸ್ಥಳೀಯರು ಪ್ಲಾನ್ ಮಾಡಿ ಈ ಕೃತ್ಯ ಎಸಗಿದ್ದು, ಇದೊಂದು ಪೂರ್ವ ನಿಯೋಜಿತ ಷಡ್ಯಂತ್ರ.ಈ ಮೂಲಕ ಕಾನೂನು ಸುವ್ಯವಸ್ಥೆ ಹದಗೆಡಿಸಲು ಪ್ರಯತ್ನ ಮಾಡಿದ್ದಾರೆ ಎಂದರು.

ರಾಜ್ಯ ಶಾಂತವಾಗಿದ್ದು, ಇದನ್ನು ಸಹಿಸದ ಸಮಾಜಘಾತಕ ಶಕ್ತಿಗಳು ಸಂದರ್ಭದ ಉಪಯೋಗ ಮಾಡಿದ್ದಾರೆ. ಕೆ.ಜಿ ಹಳ್ಳಿ ಮತ್ತು ಡಿ.ಜೆ ಹಳ್ಳಿ ಸಂಪೂರ್ಣ ಪೊಲೀಸರ ಹತೋಟಿಯಲ್ಲಿವೆ. ಘಟನೆಯ ಹಿಂದೆ ಯಾರಿದ್ದಾರೆ ಅನ್ನೋ ಬಗ್ಗೆ ತನಿಖೆ ನಡೆಯುತ್ತಿದೆ ಎಂದರು.

ಪೊಲೀಸ್ ಠಾಣೆಯಲ್ಲಿ ಘಟನೆಯ ಎಲ್ಲಾ ರೆಕಾರ್ಡ್​​​​ಗಳಿದ್ದು, ಸಿಸಿಟಿವಿ ಸಹ ಇದೆ. ಕೃತ್ಯ ಎಸಗಿದ ಎಲ್ಲರ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದರು. ಹಬ್ಬ-ಹರಿದಿನಗಳು ಶಾಂತವಾಗಿ ನಡೆಯುತ್ತಿರುವಾಗ ಸಮಾಜಘಾತುಕ ಶಕ್ತಿಗಳ ಕೃತ್ಯ ಇದಾಗಿದ್ದು, ಪ್ರಚೋದನೆ ಕೊಡುವ ಕೆಲಸ ಕೆಲವರು ಮಾಡುತ್ತಿದ್ದಾರೆ. ಸಮಾಜದಲ್ಲಿ ಶಾಂತಿ ಕದಡುವ ಯತ್ನ ನಡೆದಿದೆ. ಬೆಂಗಳೂರು ತಲುಪಿದ ತಕ್ಷಣ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಮಾಡುತ್ತೇವೆ. ಮುಂದಿನ ಕ್ರಮಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ABOUT THE AUTHOR

...view details