ಬೆಂಗಳೂರು: ಮುಂಬೈ, ಬೆಂಗಳೂರು ಹಾಗೂ ಇತರೆ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬರುವ ಜನರ ಮೇಲೆ ನಿಗಾ ಇರಿಸಿ ಅವರನ್ನು ತಪಾಸಣೆ ಮಾಡಬೇಕು. ಜೊತೆಗೆ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ಸಜ್ಜಾಗುವಂತೆ ಉಡುಪಿ ಜಿಲ್ಲಾಡಳಿತಕ್ಕೆ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಉಡುಪಿ ಜಿಲ್ಲಾಡಳಿತದ ಜತೆ ನಡೆಸಿದ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು. ಕಳೆದ ಬಾರಿ ಹೊರರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಉಡುಪಿಗೆ ಬಂದಿದ್ದರು. ಹೀಗಾಗಿ ಉಡುಪಿಯ ಸ್ಥಿತಿ ಬಿಗಡಾಯಿಸಿತು. ಈ ಬಾರಿ ಹಾಗಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಬೆಂಗಳೂರು-ಮುಂಬೈ ಮತ್ತು ಇತರ ಕಡೆಗಳಿಂದ ಬರುವ ಜನರನ್ನು ತಪಾಸಣೆ ಮಾಡುವಂತೆ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಆದೇಶ ನೀಡಿದರು.
ಇದನ್ನೂ ಓದಿ: ಸಮಯಕ್ಕೆ ಸರಿಯಾಗಿ ಸಿಗದ ಕೋವಿಡ್ ಚಿಕಿತ್ಸೆ.. ತಾಯಿ ಮಡಿಲಿನಲ್ಲೇ ಪ್ರಾಣ ಬಿಟ್ಟ ಮಗ
ಕಳೆದ ಬಾರಿಯ ಅನುಭವವನ್ನು ಆಧಾರವಾಗಿಟ್ಟುಕೊಂಡು ಈ ಬಾರಿ ಕೋವಿಡ್ ನಿಯಂತ್ರಿಸಲು ಸಮರೋಪಾದಿಯಲ್ಲಿ ಸಜ್ಜಾಗುವಂತೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ಸದ್ಯಕ್ಕೆ ಉಡುಪಿಯಲ್ಲಿ ಹೆಚ್ಚು ಪ್ರಕರಣಗಳು ಇಲ್ಲ. ಆದರೆ ಕೋವಿಡ್ ಎರಡನೆಯ ಅಲೆ ಮುಂದಿನ ದಿನಗಳಲ್ಲಿ ಹೆಚ್ಚಾಗುವ ಅಪಾಯ ಕಾಣಿಸುತ್ತಿದೆ. ಹೀಗಾಗಿ ಈಗಿನಿಂದಲೇ ಪರೀಕ್ಷೆ ಹೆಚ್ಚು ಮಾಡಿ. ಟೆಸ್ಟ್ ವರದಿ ಬೇಗನೆ ಕೊಡಲು ವ್ಯವಸ್ಥೆ ಮಾಡಿ. ಟೆಸ್ಟಿಂಗ್‌ಗೆ ಖಾಸಗಿ ಲ್ಯಾಬ್‌ಗಳನ್ನು ಬಳಕೆ ಮಾಡಿಕೊಳ್ಳಿ. ಸೋಂಕು ತಗುಲಿದ ವ್ಯಕ್ತಿಯ ಪ್ರಥಮ ಮತ್ತು ದ್ವಿತೀಯ ಸಂಪರ್ಕ ಇರುವ 30 ಜನರ ಟೆಸ್ಟಿಂಗ್ ಅನ್ನು ಕಡ್ಡಾಯವಾಗಿ ಮಾಡಬೇಕು. ಆಕ್ಸಿಜನ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಿಟ್ಟುಕೊಳ್ಳಿ. ರೆಮ್‌ಡಿಸಿವಿರ್ ಔಷಧವನ್ನು ಈಗಲೇ ಹೆಚ್ಚಿನ ಪ್ರಮಾಣದಲ್ಲಿ ಶೇಖರಣೆ ಮಾಡಿಟ್ಟುಕೊಳ್ಳಿ. ಲಸಿಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ಹಾಕಿಸಿ ಎಂದು ಅವರು ತಾಕೀತು ಮಾಡಿದರು.
ಕೋವಿಡ್ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಉಡುಪಿಯಲ್ಲಿ ಇನ್ನಷ್ಟು ಬಿಗಡಾಯಿಸಲಿದೆ. ಆದರೆ ಜಿಲ್ಲಾಡಳಿತ ಇನ್ನೂ ಪೂರ್ವತಯಾರಿ ಮಾಡಿಕೊಂಡಂತೆ ಕಾಣಿಸುತ್ತಿಲ್ಲ. ಮುಂದಿನ ನಾಲ್ಕೈದು ದಿನಗಳಲ್ಲಿ ಕೊರೊನಾ ನಿಯಂತ್ರಿಸಲು ಸಕಲ ರೀತಿಯಲ್ಲಿ ಸಜ್ಜಾಗಿ. ಟೆಸ್ಟಿಂಗ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡಿ ಎಂದು ಜಿಲ್ಲಾಡಳಿತಕ್ಕೆ ಸಚಿವ ಬೊಮ್ಮಾಯಿ ತಾಕೀತು ಮಾಡಿದರು.