ಉಡುಪಿ: ಆರ್ಎಸ್ಎಸ್ ಕುರಿತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಚನ್ನಾಗಿ ಗೊತ್ತಿದೆ. ಅವರು ಒಂದು ವರ್ಗದ ಮತಗಳನ್ನು ಪಡೆಯಲು ಜೊಲ್ಲು ಸುರಿಸುತ್ತಿದ್ದಾರೆ ಎಂದು ಗೃಹಮಂತ್ರಿ ಆರಗ ಜ್ಞಾನೇಂದ್ರ ಅವರು ಕಿಡಿಕಾರಿದರು.
ನಗರದಲ್ಲಿ ಮಾತನಾಡಿದ ಅವರು, ಆರ್ಎಸ್ಎಸ್ ಬಗ್ಗೆ ಕುಮಾರಸ್ವಾಮಿ, ಸಿದ್ದರಾಮಯ್ಯಗೆ ಚೆನ್ನಾಗಿ ಗೊತ್ತಿದೆ. ಒಂದು ವರ್ಗದ ವೋಟ್ ಬ್ಯಾಂಕಿಗೆ ಅವರು ಜೊಲ್ಲು ಸುರಿಸುತ್ತಿದ್ದಾರೆ. ಆರ್ಎಸ್ಎಸ್ ಅವರಿಗೆ ಏನು ಮಾಡಿದೆ ಹೇಳಿ?. ಆರ್ಎಸ್ಎಸ್ ದೇಶಭಕ್ತಿ ಹೇಳಿಕೊಡುವ ದೊಡ್ಡ ಸಂಘಟನೆ. ನಮ್ಮನ್ನು ಜನ ಆಯ್ಕೆ ಮಾಡಿದ್ದಾರೆ. ವೋಟ್ ಕಿತ್ತುಕೊಳ್ಳಲು ಕುಮಾರಸ್ವಾಮಿ ಸಿದ್ದರಾಮಯ್ಯ ಕಾಂಪಿಟೇಷನ್ ಮಾಡುತ್ತಿದ್ದಾರೆ. ಹೆಚ್ಡಿಕೆ ಬೆಂಗಳೂರಿನಲ್ಲಿ ಆರ್ಎಸ್ಎಸ್ ಬಗ್ಗೆ ಸುದ್ದಿಗೋಷ್ಠಿ ಮಾಡಲಿ, ಎಲ್ಲವೂ ಚರ್ಚೆಯಾಗಲಿ ಎಂದು ಹೇಳಿದರು.
ಅತ್ಯಾಚಾರ ಪ್ರಕರಣಗಳನ್ನು ಸಹಿಸಲ್ಲ: ದ.ಕ ಜಿಲ್ಲೆಯ ಬಂಟ್ವಾಳದಲ್ಲಿ ನಡೆದ 16 ವರ್ಷದ ಬಾಲಕಿ ಮೇಲಿನ ಗ್ಯಾಂಗ್ ರೇಪ್ ಕುರಿತು ಪ್ರಕರಣ ದಾಖಲಾಗಿದೆ. ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ತನಿಖೆ ವೇಗವಾಗಿ ನಡೆಯುತ್ತಿದೆ. ಅತ್ಯಾಚಾರ ಪ್ರಕರಣವನ್ನು ಸಹಿಸೋದಿಲ್ಲ ಎಂದು ತಿಳಿಸಿದರು.
ಗೋಹತ್ಯಾ ಕಾಯ್ದೆ ವಿಫಲವಾಗಿಲ್ಲ: ಕರಾವಳಿಯಲ್ಲಿ ಹೆಚ್ಚುತ್ತಿರುವ ಗೋ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಗೃಹ ಸಚಿವರು, ಗೋಹತ್ಯಾ ನಿಷೇಧ ಕಾಯ್ದೆ ಜಾರಿಯಲ್ಲಿ ಇದೆ. ಈ ಕಾಯ್ದೆ ವಿಫಲ ಆಗಿಲ್ಲ. ವಿಫಲವಾಗಲು ಪೊಲೀಸರು ಬಿಡಬಾರದು. ಅಕ್ರಮ ಗೋಸಾಗಣೆ ಮತ್ತು ಗೋಹತ್ಯೆ ಸಂಪೂರ್ಣವಾಗಿ ನಿಲ್ಲಿಸಬೇಕು. ಈ ಬಗ್ಗೆ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು.
ಸ್ಯಾಟಲೈಟ್ ಕರೆ ವಿಚಾರ: ಅಜ್ಞಾತ ಸ್ಥಳಗಳಿಂದ ಸ್ಯಾಟಲೈಟ್ ಕರೆ ವಿಚಾರವಾಗಿ ಮಾತನಾಡಿದ ಅವರು, ಎಷ್ಟು ಕರೆಗಳು ಹೋಗಿದೆ ಎಂಬ ಬಗ್ಗೆ ನನಗೆ ಮಾಹಿತಿಯಿಲ್ಲ. ಕೇಂದ್ರ ಸರ್ಕಾರದ ಟೀಮ್ ನಮ್ಮ ಪೊಲೀಸರ ಜೊತೆ ಸಂಪರ್ಕದಲ್ಲಿದೆ. ಇದು ರಾಷ್ಟ್ರೀಯ ಭದ್ರತೆಯ ಪ್ರಶ್ನೆ. ಈ ಬಗ್ಗೆ ಹೆಚ್ಚೇನೂ ಮಾತನಾಡಲು ಸಾಧ್ಯವಿಲ್ಲ. ಯಾವುದೇ ಅರಣ್ಯ ಪ್ರದೇಶದಿಂದ ಕರೆ ಹೋಗಿರಲಿ. ಅದನ್ನು ಪತ್ತೆಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.
ಪೊಲೀಸ್ ನೇಮಕಾತಿಗೆ ಲಂಚ: ಲಂಚ ಕೇಳಿದವರ ಬಗ್ಗೆ ನನಗೆ ನೇರ ಮಾಹಿತಿ ಕೊಡಿ. ಇಲ್ಲಿ ಯಾರು ಯಾರನ್ನು ಖರೀದಿ ಮಾಡಲು ಸಾಧ್ಯವಿಲ್ಲ. ಈ ಕುರಿತು ಡಿಜಿಪಿ ಜೊತೆ ಮಾಡಿದ್ದೇನೆ. ವಿಶೇಷ ತಂಡ ರಚನೆ ಮಾಡಿ ದಾಳಿ ಮಾಡಲಾಗುತ್ತದೆ. ಪ್ರತಿ ಪೊಲೀಸ್ ಠಾಣೆ ಮೇಲೆ ನಿಗಾ ಇಡಲಾಗುವುದು ಎಂದು ಸಚಿವರು ಹೇಳಿದರು.
ಎಸ್ಐ ಪೋಸ್ಟ್ಗೆ 25 ಲಕ್ಷ ರೂ. ಲಂಚ ತೆಗೆದುಕೊಂಡ ಬಗ್ಗೆ ಬೆಂಗಳೂರಿನಲ್ಲಿ ದೂರು ದಾಖಲಾಗಿದೆ. ನೇಮಕದ ಹಿಂದಿನ ಜಾಲವನ್ನು ಬಯಲಿಗೆಳೆಯುತ್ತೇವೆ. ಮೆರಿಟ್ ಮತ್ತು ಯೋಗ್ಯತೆ ಇರುವವರು ಪೊಲೀಸ್ ಇಲಾಖೆಗೆ ಬರಬೇಕು. ಹಣ ಪೊಲೀಸ್ ಇಲಾಖೆಯನ್ನು ಕೊಂಡುಕೊಳ್ಳಬಾರದು. ಲಂಚ ವಿಚಾರದಲ್ಲಿ ಸ್ಥಳೀಯರು ಪೊಲೀಸ್ ಠಾಣೆಗೆ ದೂರು ಕೊಡಿ ಅಂತಾ ಸಚಿವರು ಹೇಳಿದ್ದಾರೆ.
ಮತಾಂತರ ಜಾಲ:ಇದೇ ವೇಳೆ, ಪೊಲೀಸ್ ವಸತಿ ಸಮುಚ್ಛಯ ಉದ್ಘಾಟಿಸಿ ನಂತರ ಮತಾಂತರದ ಬಗ್ಗೆ ಮಾತನಾಡಿದ ಗೃಹಸಚಿವ ಆರಗ ಜ್ಞಾನೆಂದ್ರ, ಮತಾಂತರ ಮಾಡಲು ನಾವು ಬಿಡುವುದಿಲ್ಲ. ವಿಧಾನ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿದ್ದೇವೆ. ಒಬ್ಬ ಶಾಸಕರು ತನ್ನ ತಾಯಿಯನ್ನೇ ಮತಾಂತರ ಮಾಡಿದ ಬಗ್ಗೆ ಹೇಳಿಕೊಂಡಿದ್ದಾರೆ. ನನ್ನೂರ ಹತ್ತಿರಾನೂ ಹೀಗೆ ಆಗಿದೆ. ಧರ್ಮ ಬದಲಾವಣೆ ಮಾಡುವ ವ್ಯವಸ್ಥಿತ ಜಾಲ ಇದೆ. ಈ ಜಾಲವನ್ನು ನಾವು ಮಟ್ಟ ಹಾಕುತ್ತೇವೆ. ಈ ನಿಟ್ಟಿನಲ್ಲಿ ವಿಶೇಷ ಕಾಯ್ದೆ ಜಾರಿಗೆ ತರುತ್ತೇವೆ. ಪೊಲೀಸರಿಗೆ ಇನ್ನಷ್ಟು ಅಧಿಕಾರ ಕೊಡುತ್ತೇವೆ ಎಂದರು.
ಯಾರನ್ನೂ ಬಿಡುವುದಿಲ್ಲ: ಕರ್ನಾಟಕ ರಾಜ್ಯ, ಭಾರತ ದೇಶ ಯಾರಿಗೂ ಧರ್ಮಛತ್ರವಲ್ಲ. ನನಗೆ ಎಲ್ಲ ಮಾಹಿತಿ ಇದೆ. ಬಾಂಗ್ಲಾದೇಶಿಯರನ್ನು ದೇಶದೊಳಗೆ ನುಗ್ಗಿಸುವಂತ ಕೆಲಸ ಆಗುತ್ತಿದೆ. ಅಕ್ರಮ ವಲಸಿಗರಿಗೆ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಕೊಡಿಸಲಾಗುತ್ತದೆ. ಇದರ ಹಿಂದೆ ದೊಡ್ಡಜಾಲ ಕಾರ್ಯನಿರ್ವಹಿಸುತ್ತಿದೆ. ಸದ್ಯದಲ್ಲೇ ಅವರನ್ನು ನಾವು ಮುಗಿಸುತ್ತೇವೆ. ಈ ಬಗ್ಗೆ ಅಧಿಕಾರಿಗಳಿಗೆ ನಾನು ಹೇಳಿದ್ದೇನೆ. ಈ ಹಿಂದೆ ಪಟಾಕಿ ಹೊಡೆದಂತೆ ಬಾಂಬು ಸಿಡಿಸುತ್ತಿದ್ದರು. ನಮ್ಮ ಕೇಂದ್ರ ಸರ್ಕಾರ ಯಾರನ್ನೂ ಬಿಡುವುದಿಲ್ಲ ಎಂದು ಸಚಿವರು ಎಚ್ಚರಿಕೆ ನೀಡಿದರು.