ಉಡುಪಿ :ಜಿಲ್ಲೆಯ ಕುಂದಾಪುರದ ವಿವಿಧ ಕಾಲೇಜಿನಲ್ಲಿ ಹಿಜಾಬ್-ಕೇಸರಿ ಶಾಲು ವಿವಾದ ಮುಂದುವರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಅನೇಕ ಕಾಲೇಜುಗಳ ಆಡಳಿತ ಮಂಡಳಿಗಳು ಪೋಷಕರೊಂದಿಗೆ ತುರ್ತು ಸಭೆ ನಡೆಸಿವೆ.
ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕಾಲೇಜು ಶೈಕ್ಷಣಿಕ ಆಡಳಿತ ಮಂಡಳಿ ಪೋಷಕರೊಂದಿಗೆ ತುರ್ತು ಸಭೆ ನಡೆಸಿತು. ಈ ವೇಳೆ ಪೋಷಕರೊಬ್ಬರು ಮಾತನಾಡಿ, ಪೋಷಕರು, ಮುಸ್ಲಿಂ ವಿದ್ಯಾರ್ಥಿನಿಯರು ಪ್ರಾಂಶುಪಾಲರಿಗೆ ಮನವಿ ಪತ್ರವನ್ನು ಕೊಟ್ಟಿದ್ದೇವೆ.
ತಲೆಗೆ ಸ್ಕಾರ್ಫ್ ತೊಡಲು ಅವಕಾಶ ಕೋರಿದ್ದೇವೆ. ಪ್ರಾಂಶುಪಾಲರಿಂದ ಉತ್ತಮ ಫಲಿತಾಂಶ ಬರಬಹುದು. ನಾವು ಕುಂದಾಪುರದಲ್ಲಿ ಎಷ್ಟು ವರ್ಷ ಅನ್ಯೋನ್ಯತೆಯಿಂದ ಇದ್ದೆವು. ರಾಜಕೀಯ ಸಂಘಟನೆ ಈ ವಿಚಾರಕ್ಕೆ ಪ್ರವೇಶ ಆಗಬಾರದು. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿ ನಮಗೆ ಮುಖ್ಯ ಎಂದರು.
ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜು ಎಸ್ಬಿಸಿ ಸಭೆ ಪೂರ್ಣಗೊಂಡಿದೆ. ಧಾರ್ಮಿಕತೆಗೆ ತರಗತಿಯೊಳಗೆ ಅವಕಾಶ ಬೇಡ. ಹಿಜಾಬ್ ಅಥವಾ ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳು ತರಗತಿಗೆ ಬರುವಂತಿಲ್ಲ. ಶುಕ್ರವಾರ ಗೇಟ್ ಬಾಗಿಲಲ್ಲೇ ಕುಳಿತಿದ್ದ ವಿದ್ಯಾರ್ಥಿನಿಯರಿಗೆ ಸೋಮವಾರದಿಂದ ಕಾಲೇಜು ಗೇಟಿನೊಳಗೆ ಬರಲು ಅವಕಾಶ ನೀಡಲಾಗಿದೆ.