ಉಡುಪಿ:ಜಿಲ್ಲೆಯ ಮಹಿಳಾ ಕಾಲೇಜಿನಲ್ಲಿ ಹಿಜಾಬ್ ವಿವಾದ ಮುಂದುವರೆದಿದ್ದು, ಮೂರು ವಾರ ಕಳೆದರೂ ಅಂತ್ಯಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ಹಿಜಾಬ್ ಧರಿಸುವುದು ತಮ್ಮ ಹಕ್ಕು ಎಂದು ವಿದ್ಯಾರ್ಥಿನಿಯರು ಹೇಳಿದರೆ, ಮತ್ತೊಂದೆಡೆ ಕಾಲೇಜು ಆಡಳಿತ ಮಂಡಳಿಯು ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ.
ಕಳೆದ ಮೂರು ವಾರಗಳ ಹಿಂದೆ ಆರಂಭವಾದ ಹಿಜಾಬ್ ವಿವಾದವು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ನಮಗೆ ಧರ್ಮದ ಕಟ್ಟುಪಾಡುಗಳೇ ಮುಖ್ಯ, ಇದು ನಮ್ಮ ಹಕ್ಕು ಎಂದು ವಿದ್ಯಾರ್ಥಿನಿಯರು ಹಠಕ್ಕೆ ಬಿದ್ದಿದ್ದು, ಪರೋಕ್ಷವಾಗಿ ಕೆಲ ಸಂಘಟನೆಗಳು ಇದಕ್ಕೆ ಸಾಥ್ ನೀಡುತ್ತಿವೆ. ಹೀಗಾಗಿ ಪರಿಸ್ಥಿತಿ ಮತ್ತಷ್ಟು ಇನ್ನಷ್ಟು ಬಿಗಡಾಯಿಸುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಕಳೆದ 37 ವರ್ಷಗಳಿಂದ ಉಡುಪಿಯ ಪದವಿಪೂರ್ವ ಮಹಿಳಾ ಕಾಲೇಜಿನಲ್ಲಿ ಸರ್ವಧರ್ಮದ ವಿದ್ಯಾರ್ಥಿನಿಯರು ಸಮವಸ್ತ್ರ ಮಾತ್ರ ಧರಿಸಿ ತರಗತಿಗೆ ಹಾಜರಾಗುತ್ತಿದ್ದರು. ಹಿಜಾಬ್ ಧರಿಸಿ ಬಂದವರು, ತರಗತಿ ಪ್ರವೇಶಿಸುವಾಗ ಅದನ್ನು ತೆಗೆದಿರಿಸಿ ಪಾಠ ಕೇಳುತ್ತಿದ್ದರು. ಈಗ ನೂರಕ್ಕೂ ಅಧಿಕ ಮುಸ್ಲಿಂ ವಿದ್ಯಾರ್ಥಿನಿಯರು ಇಲ್ಲಿ ಪಿಯುಸಿ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಹಿಜಾಬ್ ವಿವಾದ ಅಂತ ಆರಂಭವಾಗಿರುವುದು ಇದೇ ಮೊದಲಾಗಿದೆ. ಕೆಲ ಸಂಘಟನೆಗಳ ಬೆಂಬಲದೊಂದಿಗೆ ವಿದ್ಯಾರ್ಥಿನಿಯರು ಈ ಹೋರಾಟ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.