ಉಡುಪಿ:ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಪೇಜಾವರ ಶ್ರೀಗಳು ಚಿಕಿತ್ಸೆ ಫಲಿಸದೇ ಇಂದು ನಿಧನರಾಗಿದ್ದಾರೆ. ಪೇಜಾವರ ಶ್ರೀಗಳು ತಮ್ಮ ಸಾಮಾಜಿಕ ಕಾರ್ಯಗಳಿಂದ ದೇಶಾದ್ಯಂತ ಮನೆ ಮಾತಾಗಿದ್ದರು. ರಾಮಮಂದಿರ ವಿಷಯ ಸೇರಿದಂತೆ ಪ್ರಮುಖ ವಿಚಾರಗಳಲ್ಲಿ ತಮ್ಮದೇ ವಿಚಾರ ಮಂಡಿಸಿ ಪ್ರಸಿದ್ಧರಾಗಿದ್ದರು.
ಉಮಾಭಾರತಿ, ಅಡ್ವಾಣಿ, ನರೇಂದ್ರ ಮೋದಿ ಸೇರಿದಂತೆ ಗಣ್ಯಾತಿಗಣ್ಯ ಶಿಷ್ಯ ಬಳಗವನ್ನ ಹೊಂದಿರುವ ಪೇಜಾವರ ಶ್ರೀಗಳು ಇಂದು ನಮ್ಮವರನ್ನೆಲ್ಲ ಬಿಟ್ಟು ಹೋಗಿದ್ದಾರೆ. ಹೀಗೆ ಹೈ ಪ್ರೊಫೈಲ್ ಸ್ವಾಮೀಜಿ ಎನಿಸಿಕೊಂಡಿದ್ದ ಪೇಜಾವರ ಶ್ರೀಗಳು, ಉಡುಪಿಯಿಂದ 120 ಕಿ.ಮೀ ದೂರದ ಸುಬ್ರಮಣ್ಯದ ಸಮೀಪದ ಹಳ್ಳಿಯಲ್ಲಿ ಜನಿಸಿದ್ದರು. ಅದು ಅಂತಿಂಥ ಸ್ಥಳವಲ್ಲ, ಆಚಾರ್ಯ ಮಧ್ವರು ನಡೆದಾಡಿದ ಪವಿತ್ರ ಸ್ಥಳ. ಹೆಸರು ರಾಮಕುಂಜ. ಬಹಳ ಜನಕ್ಕೆ ಈ ಹೆಸರು ಕೇಳಿಯೇ ಗೊತ್ತಿಲ್ಲ. ಅಂಥ ಅಜ್ಞಾತವಾದದ್ದು ಈ ಕುಗ್ರಾಮ. ಇಂಥ ಹಳ್ಳಿಯಲ್ಲಿ 1931 ಏಪ್ರಿಲ್27 ರಂದು ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದರು ಜನಿಸಿದ್ದರು.
ತಂದೆ ನಾರಾಯಣಾಚಾರ್ಯ, ತಾಯಿ ಕಮಲಮ್ಮ. ಹುಟ್ಟಿದ ಎರಡನೆಯ ಗಂಡು ಮಗುವಿಗೆ ‘ವೆಂಕಟರಮಣ’ ಎಂದು ಹೆಸರಿಟ್ಟದ್ದರು ನಾರಾಯಣಚಾರ್ಯ, ಕಮಲಮ್ಮ ದಂಪತಿ. ಪ್ರಜಾಪತಿ ಸಂವತ್ಸರದ ವೈಶಾಖ ಶುದ್ಧ ದಶಮಿ ಸೋಮವಾರದಂದು ವೆಂಕಟರಮಣನ ಶುಭ ಮುಹೂರ್ತದಲ್ಲಿ ಪೇಜಾವರರ ಜನನವಾಗುತ್ತೆ. ರಾಮಕುಂಜದ ಹಳ್ಳಿಯ ಸಂಸ್ಕೃತ ಎಲಿಮೆಂಟರಿ ಶಾಲೆಯಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ್ದ ಶ್ರೀಪಾದರು, ಏಳನೆಯ ವರ್ಷದಲ್ಲೇ ಗಾಯತ್ರಿಯ ಉಪದೇಶ ಮಾಡಿಕೊಂಡರು. ವಿಶೇಷ ಎಂದರೆ, ವೇದಮಾತೆ ವಟುವಿನ ತುಟಿಯಲ್ಲಿ ನಲಿದಳು ಎಂದರೆ ತಪ್ಪಾಗಲಕ್ಕಿಲ್ಲ.
ಉಪನಯನಕ್ಕೂ ಮುಂಚೆ, ಹುಡುಗನಿಗಿನ್ನೂ ಆರು ವರ್ಷ. ಆಟವಾಡುವ ವಯಸ್ಸು. ತಂದೆ – ತಾಯಿ ಮಗನನ್ನು ಉಡುಪಿಗೆ ಕರೆ ತಂದರು. ಆಗ ಪೇಜಾವರ ಮಠದ ಪರ್ಯಾಯವೇ ನಡೆದಿತ್ತು. ವೆಂಕಟರಮಣ, ಮಠದ ಸ್ವಾಮೀಜಿ ಕೃಷ್ಣ ಪೂಜೆ ಮಾಡುವುದನ್ನು ಆಸಕ್ತಿಯಿಂದ ಗಮನಿಸಿದ. ಏನೋ ಒಂದು ಅಂತರಂಗದ ಸೆಳೆತ, ತಾನೂ ಹೀಗೆ ಕೃಷ್ಣನನ್ನು ಪೂಜಿಸಬಹುದೇ? ಎಂದು ಮನಸಿನಲ್ಲಿ ಅಂದುಕೊಂಡರು. ಅಷ್ಟರಲ್ಲೇ ತಂದೆ–ತಾಯಿ ವೆಂಕಟರಮಣನನ್ನು ಸ್ವಾಮಿಗಳ ಭೇಟಿಗೆ ಕರೆದೊಯ್ದರು. ವೆಂಕಟರಮಣ ಭಕ್ತಿಯಿಂದ ಸ್ವಾಮಿಗಳಿಗೆ ನಮಸ್ಕರಿಸಿದ. ಪುಟ್ಟ ಹುಡುಗನ ಮುಗ್ಧ ಮುಖ, ಅಲ್ಲಿ ತುಂಬಿದ ಭಕ್ತಿ ಭಾವ, ನಡೆಯ ಚುರುಕುತನ ಎಲ್ಲ ಗಮನಿಸಿದ ಸ್ವಾಮಿಗಳಿಗೆ ಏನನ್ನಿಸಿತೋ! ಆಕಸ್ಮಿಕವಾಗಿ ಅವರ ಬಾಯಿಂದ ಹೀಗೊಂದು ಮಾತು ಬಂತು. ‘ನೀನು ನನ್ನಂತೆ ಸ್ವಾಮಿಯಾಗುತ್ತಿಯಾ?’. ವೆಂಕಟರಮಣ ಉತ್ತರಿಸಿದ: “ಹ್ಞೂ, ಆಗುತ್ತೇನೆ” ಈ ಆಕಸ್ಮಿಕ ಸಂಭಾಷಣೆಗೆ ಒಳಗಿನಿಂದ ಪ್ರಾರ್ಥಿಸಿದ ಮೇಲೆ ನಿಂತ ದೇವತೆಗಳು ‘ತಥಾಸ್ತು’ ಎಂದರಂತೆ...
ಹಂಪಿಯ ಅಂಗಳದಲ್ಲಿ ಯತಿಯಾಗಿ ದೀಕ್ಷೆ!
ಇನ್ನು ಪರ್ಯಾಯದ ಅವಧಿ ಮುಗಿಯಿತು. ಆಗ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಮಾನ್ಯ ತೀರ್ಥರು ಸಂಚಾರಕ್ಕೆ ಹೊರಟರು. ಪಯಣದ ಹಾದಿಯಲ್ಲಿ ಹಂಪಿಯನ್ನು ತಲುಪಿದರು. ವ್ಯಾಸತೀರ್ಥರ ತಪೋಭೂಮಿಯಾದ ಹಂಪಿಯಲ್ಲಿ ಅವರ ನಿರ್ಧಾರ ಗಟ್ಟಿಗೊಂಡಿತು. ಅವರು ವಿಳಂಬ ಮಾಡದೆ ವೆಂಕಟರಮಣನನ್ನು ಕರೆಸಿಕೊಂಡರು. ಆಗಷ್ಟೇ ಉಪನೀತನಾಗಿದ್ದ ವಟು ವೆಂಕಟರಮಣ ಹಿರಿಯರ ಜತೆ ಹಂಪಿಗೆ ತೆರಳಿದರಂತೆ.
ವೆಂಕಟರಮಣ ವಿಶ್ವೇಶ ತೀರ್ಥರಾಗಿದ್ದು ಹೇಗೆ?
ಬಹುಧಾನ್ಯ ಸಂವತ್ಸರದ ಮಾರ್ಗಶಿರ ಶುದ್ಧ ಪಂಚಮಿಯಂದು (3.12.1938) ವೆಂಕಟರಮಣನಿಗೆ ಹಂಪಿಯ ಯಂತ್ರೋದ್ಧಾರ ಮುಖ್ಯಪ್ರಾಣನ ಸನ್ನಿಧಿಯಲ್ಲಿ ದೀಕ್ಷೆ ನಡೆಯಿತು. ರಾಮಕುಂಜದ ಪುಟ್ಟ ಹಳ್ಳಿಯ ಮುಗ್ಧ ಬಾಲಕ, ಇನ್ನೂ ಏಳರ ಬಾಲ್ಯದ ಹಸುಳೆ, ಅಧೋಕ್ಷಜ ತೀರ್ಥರ ಸಂಸ್ಥಾನದ ಉತ್ತರಾಧಿಕಾರಿಯಾಗಿ, ಪೇಜಾವರ ಮಠದ ಪರಂಪರೆಯ 32ನೆಯ ಯತಿಯಾಗಿ, ಆಚಾರ್ಯ ಮಧ್ವರ ವೇದಾಂತ ಪೀಠವನ್ನೇರಿದರು. ಈ ಮೂಲಕ ವೆಂಕಟರಾಮ ‘ವಿಶ್ವೇಶ ತೀರ್ಥ’ರಾದರು.
ಬಾಲ್ಯದಲ್ಲೇ ಕ್ರಾಂತಿಕಾರಿ ಹೆಜ್ಜೆ...
ಶ್ರೀಪಾದರನ್ನು ಬಾಲ್ಯದಿಂದ ಕಾಡುತ್ತಿದ್ದ ಸಮಸ್ಯೆ ಎಂದರೆ ಅದು ಅಸ್ಪೃಶ್ಯತೆ. ಸಮಾಜದಲ್ಲಿ ಒಂದು ವರ್ಗವನ್ನು ಅಸ್ಪೃಶ್ಯರೆಂದು ಪರಿಗಣಿಸಿ ದೂರವಿಡುವುದರ ವಿರುದ್ಧ ಅವರ ಒಳಮನಸ್ಸು ಸಿಡಿದೇಳುತ್ತಲೇ ಇತ್ತು.