ಉಡುಪಿ: ಕೊರೊನಾ ಸಾಂಕ್ರಾಮಿಕಎಲ್ಲರನ್ನು ಕಂಗೆಡಿಸಿದೆ. ಕೂಲಿ ಮಾಡಿ ಜೀವನ ಕಟ್ಟಿಕೊಂಡಿದ್ದ ಬಡವರನ್ನು ಮೇಲೇಳದಂತೆ ಪಾತಾಳಕ್ಕೆ ತಳ್ಳಿದೆ. ಆಗರ್ಭ ಶ್ರೀಮಂತನೂ ಲೆಕ್ಕಾಚಾರ ಮಾಡುವ ಸ್ಥಿತಿ ಬಂದಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಉಡುಪಿಯ ಬಡ ಕೂಲಿ ಕಾರ್ಮಿಕನ ಹೃದಯ ಬಡವರಿಗಾಗಿ ಮಿಡಿದಿದೆ.
ಬಡವರ ತುತ್ತಿನ ಚೀಲ ತುಂಬಿಸಿದ ಕೂಲಿ ಕಾರ್ಮಿಕ.. ಇವರು ಅಂಬಲಪಾಡಿಯ ಕೃಷ್ಣ. ಮರ ಕಡಿಯುವುದು ಮರದ ಗೆಲ್ಲು ಜಾರಿಸುವುದು ಇವರ ಕಾಯಕ. ದಲಿತ ಸಮುದಾಯದ ಕೃಷ್ಣ ಬೆವರು ಸುರಿಸಿ ಸಂಪಾದಿಸಿದ ಸುಮಾರು 70 ಸಾವಿರ ರೂಪಾಯಿ ದಾನ ಮಾಡಿದ್ದಾರೆ. ಅಕ್ಕಿ-ಬೇಳೆ, ಉಪ್ಪು, ಸಕ್ಕರೆ, ಚಹಾ ಪುಡಿ, ಎಲೆ-ಅಡಿಕೆ ಮತ್ತಿತರ ಅಗತ್ಯ ವಸ್ತುಗಳನ್ನು 70 ಕುಟುಂಬಗಳಿಗೆ ಹಂಚಿದ್ದಾರೆ.
ಕೃಷ್ಣ ಆರ್ಥಿಕವಾಗಿ ಶ್ರೀಮಂತನಲ್ಲ. ಕೆಲ ಶ್ರೀಮಂತರಿಗಿಲ್ಲದ ಹೃದಯ ಶ್ರೀಮಂತಿಕೆ ಕೃಷ್ಣನಿಗಿದೆ. ತಾನು ಚಿಕ್ಕಂದಿನಲ್ಲಿ ಅನುಭವಿಸಿದ ಕಷ್ಟ ಏನು ಎಂಬುದು ಮರೆಯದ ಈತ ಉಡುಪಿ ಸುತ್ತಲ ಐದಾರು ಗ್ರಾಮದ ಕಡು ಬಡವರನ್ನು ಗುರುತಿಸಿ ಎಲ್ಲರಿಗೂ ದಿನಸಿ ಕಿಟ್ ನೀಡಿದ್ದಾರೆ. ಕಷ್ಟಪಟ್ಟು ಕೂಡಿಟ್ಟ ಹಣವನ್ನು ಕಠಿಣ ಸಂದರ್ಭದಲ್ಲಿ ಬಡವರಿಗಾಗಿ ವ್ಯಯಿಸುತ್ತಿದ್ದಾರೆ.
ಇವರ ಸಮಾಜ ಸೇವೆಗೆ ಮತ್ತೊಬ್ಬ ಸಮಾಜಸೇವಕ ವಿಶು ಶೆಟ್ಟಿ ಅಂಬಲ್ಪಾಡಿ ಪ್ರೇರಣೆಯಂತೆ. ವಿಶು ಅವರ ನಿರಂತರ ಜನಸೇವೆಯಿಂದ ಉತ್ತೇಜಿತರಾಗಿ ಈ ಕೆಲಸ ಮಾಡಿದ್ದಾರಂತೆ. ಅದೇನೆ ಇರ್ಲಿ ಎಲ್ಲರೂ ಈ ಕೃಷ್ಣರಂತೆ ಆಲೋಚನೆ ಮಾಡಿದರೆ ಬಡವರು ಉಪವಾಸ ಇರಬೇಕಾಗಿಲ್ಲ ಅಲ್ವಾ..
ಓದಿ:ಸಂಚಾರಿ ವಿಜಯ್ ಅಂಗಾಂಗ ದಾನ ಪ್ರಕ್ರಿಯೆ ಆರಂಭ: ಮಧ್ಯರಾತ್ರಿ ಡೆತ್ ಡಿಕ್ಲೆರೇಷನ್ ಸಾಧ್ಯತೆ