ಉಡುಪಿ: ಕಡಲ ಕೊರೆತಕ್ಕೆ ತುತ್ತಾದ ಕಾಪು ತಾಲೂಕಿನ ಮುಳೂರು ಭಾಗಕ್ಕೆ ಸೋಮವಾರ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜನರ ಸಮಸ್ಯೆ ಆಲಿಸಿ ಶೀಘ್ರ ಬಗೆಹರಿಸುವ ಭರವಸೆ ಕೊಟ್ಟರು.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಕಳೆದ ಹತ್ತು ದಿನಗಳಿಂದ ವಾಡಿಕೆಗಿಂತ ಹೆಚ್ಚು ಮಳೆ ಸುರಿಯುತ್ತಿದೆ. ಅಂದಾಜು 30 ಕೋಟಿ ರೂ ಆಸ್ತಿಗೆ ನಷ್ಟ ಉಂಟಾಗಿದೆ. 7 ಮನೆಗಳು ಕುಸಿದಿವೆ. 30 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಪ್ರತಿ ವರ್ಷದಂತೆ ಕಡಲ್ಕೊರೆತ ತಡೆಯಲು ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ. ತಡೆಗೋಡೆ ಇದ್ದಲ್ಲೂ ಕೆಲವೆಡೆಗಳಲ್ಲಿ ನೀರು ನುಗ್ಗುತ್ತಿದೆ. ಇದಕ್ಕೆ ಶಾಶ್ವತ ತಡೆಗೋಡೆ ನಿರ್ಮಾಣ ಆಗಬೇಕು. ಸಿಆರ್‌ಝುಡ್ ಸಮಸ್ಯೆ ಇರುವ ಕಾರಣ ಕೆಲವು ಕೆಲಸಗಳು ಬಾಕಿ ಇವೆ. ಪರಿಹಾರದ ಬಗ್ಗೆ ಸಿಎಂ ಹಾಗೂ ಕಂದಾಯ ಸಚಿವರಲ್ಲಿ ಈಗಾಗಲೇ ಮಾತನಾಡಿದ್ದೇನೆ. ಹಂತಹಂತವಾಗಿ ಹಣ ನೀಡುವ ಭರವಸೆ ನೀಡಿದ್ದಾರೆ" ಎಂದರು.