ಉಡುಪಿ:ಜಿಲ್ಲೆಯ ಕಾಪು ತಾಲೂಕಿನಲ್ಲಿ ಗುರುವಾರ ರಾತ್ರಿ ಗಾಳಿಸಹಿತ ಜೋರು ಮಳೆ ಸುರಿಯಿತು. ಶಿರ್ವ ರಸ್ತೆಯಲ್ಲಿ ಸಂಚರಿಸುತ್ತಿದ್ದ ರಿಕ್ಷಾ ಮೇಲೆ ಬೃಹತ್ ಮರ ಬಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾಪುವಿನಿಂದ ಪಾದೂರಿಗೆ ತೆರಳುತ್ತಿದ್ದ ರಿಕ್ಷಾದ ಮೇಲೆ ಧೂಪದ ಮರ ಉರುಳಿ ಬಿದ್ದಿದೆ. ಈ ಸಂದರ್ಭದಲ್ಲಿ ಇಬ್ಬರು ಪ್ರಯಾಣಿಕರು ರಿಕ್ಷಾದೊಳಗೆ ಸಿಲುಕಿಕೊಂಡು ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದುಬಂದಿದೆ. ಪಾದೂರು ಕೂರಾಲು ರೈಸ್ ಮಿಲ್ ಬಳಿಯ ನಿವಾಸಿ ಪುಷ್ಪಾ ಕುಲಾಲ್ (45) ಮತ್ತು ಕಳತ್ತೂರು ನಿವಾಸಿ ಕೃಷ್ಣ (48) ಮೃತಪಟ್ಟವರು. ಚಾಲಕ ಶರೀಫ್ ಪಾರಾಗಿದ್ದಾರೆ.
ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ. ಮರ ತೆರವುಗೊಳಿಸಲು ಹರಸಾಹಸ ಪಡಬೇಕಾಯಿತು. ಪೊಲೀಸ್, ಮೆಸ್ಕಾಂ, ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ದಳಸಹಿತ ನೂರಾರು ಮಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ಜೆಸಿಬಿ, ಕ್ರೇನ್ ಸಹಾಯದಿಂದ ಒಂದೂವರೆ ಗಂಟೆಗಳ ಕಾಲ ಶ್ರಮಿಸಿ ಮರ ತೆರವುಗೊಳಿಸಲಾಯಿತು. ಸ್ಥಳದಲ್ಲಿ ಹೆಚ್ಚು ಜನ ಜಮಾಯಿಸಿದ ಪರಿಣಾಮ ಕೆಲ ಹೊತ್ತು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು.