ಉಡುಪಿ :ಜಿಲ್ಲಾ ಪ್ರವಾಸದಲ್ಲಿರುವ ಆರೋಗ್ಯ ಸಚಿವ ಶ್ರೀರಾಮಲು ಅವರು ಜಿಲ್ಲಾಸ್ಪತ್ರೆಯಲ್ಲೇ ವಾಸ್ತವ್ಯ ಹೂಡಿದ್ದು, ವೈದ್ಯಾಧಿಕಾರಿಗಳ ಜೊತೆಗೆ ಇಂದು ಸಭೆ ನಡೆಸಲಿದ್ದಾರೆ.
ನಗರದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿರುವ ಎಲ್ಲ ಸರ್ಕಾರಿ ಆಸ್ಪತ್ರೆಗಳು ಸುಧಾರಣೆಯಾಗಬೇಕು. ಆಸ್ಪತ್ರೆಗಳಿಗೆ ಅಗತ್ಯ ಸೌಕರ್ಯಗಳನ್ನು ನೀಡಬೇಕು ಎಂಬ ಉದ್ದೇಶದಿಂದ ರಾಜ್ಯದ ಉದ್ದಗಲಕ್ಕೂ ಪ್ರವಾಸವನ್ನು ಕೈಗೊಂಡಿದ್ದೇನೆ. ಎಲ್ಲೆಲ್ಲಿ ಅವಕಾಶವಿದೆಯೋ ಅಲ್ಲಲ್ಲಿ ವಾಸ್ತವ್ಯ ಹೂಡಿ ಮೂಲಸೌಕರ್ಯ ಒದಗಿಸುವ ಕಾರ್ಯ ಕೈಗೊಂಡಿದ್ದೇನೆ. ನನ್ನ ಅಧಿಕಾದ ಅವಧಿ ಇರುವವರೆಗೂ ಈ ಕಾರ್ಯ ನಿರಂತರವಾಗಿ ಸಾಗಲಿದೆ. ಸುಧಾರಣೆಯಾಗುವವರೆಗೂ ಆಸ್ಪತ್ರೆಗಳ ಭೇಟಿ ಹೀಗೆಯೇ ಮುಂದುವರಿಯಲಿದೆ ಎಂದರು.
ಮಹೇಶ್ ಕುಮಟಳ್ಳಿಗೆ ಲಕ್ಷ್ಮಣ ಸವದಿ ಅವಮಾನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, 'ಅದು ಗಂಭೀರವಾದ ವಿಚಾರ ಅಲ್ಲ. ಉತ್ತರ ಕರ್ನಾಟಕದ ಆಡು ಭಾಷೆನೇ ಹೀಗೆ. ನಮ್ ಕಡೆ ಹೇಗೆ ಮಾತಾಡ್ತಾರೆ ಅಂತ ನೀವೂ ಊಹಿಸಲೂ ಸಾಧ್ಯ ಇಲ್ಲ. ನಮ್ ಆಡು ಮಾತಿಗೆ ಯಾರೂ ತಪ್ಪು ಭಾವಿಸಲ್ಲ. ಈ ಕಡೆ ಮಂದಿ ನಮ್ಮಮಾತು ಕೇಳಿದ್ರೆ ಎದೆ ಹೊಡೆದುಕೊಳ್ಳುತ್ತಾರೆ. ಸವದಿಯವರು ಉದ್ದೇಶ ಪೂರ್ವಕವಾಗಿ ಮಾತಾಡಿಲ್ಲ. ಕುಮಟಳ್ಳಿಯವರು ತಪ್ಪಾಗಿ ಅರ್ಥೈಸಿಕೊಂಡಿರಬಹುದು. ಕುಮಟಳ್ಳಿನೂ ನಮ್ಮ ಸ್ನೇಹಿತರು, ಸವದಿ ಕೂಡಾ ನಮ್ಮ ಸ್ನೇಹಿತರು. ಏನಾದ್ರೂ ಗೊಂದಲ ಇದ್ದರೇ ನಾವು ಸರಿಪಡಿಸುವ ಕೆಲಸ ಮಾಡುತ್ತೇವೆ' ಎಂದರು.
ಸಂಪುಟ ವಿಸ್ತರಣೆ ವೇಳೆ ಡಿಸಿಎಂ ಆಗುವ ಸೂಚನೆ ಇದಿಯಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಶ್ರೀಕೃಷ್ಣನ ದಯೆ ಹೇಗಿದೆಯೋ ನೋಡೋಣ' ಎಂದರು.
ಆಸ್ಪತ್ರೆಯ ತುರ್ತು ನಿಗಾ ಘಟಕ ವಾರ್ಡ್ ಬಳಿಯ ವೈದ್ಯರ ಕೊಠಡಿಯಲ್ಲಿ ಸಚಿವರು ವಾಸ್ತವ್ಯ ಹೂಡಿದ್ದು, ವಾಸ್ತವ್ಯಕ್ಕೂ ಮುನ್ನ ಆಸ್ಪತ್ರೆಯಲ್ಲಿ ಸುತ್ತಾಡಿ ರೋಗಿಗಳ ಜೊತೆಗೆ ಕೆಲಕಾಲ ಸಮಾಲೋಚನೆ ನಡೆಸಿದರು. ಇಂದು ವೈದ್ಯಾಧಿಕಾರಿಗಳ ಸಭೆ ನಡೆಸಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.