ಕರ್ನಾಟಕ

karnataka

ETV Bharat / state

ಶಾಲೆಯ ಅಭಿವೃದ್ಧಿಗಾಗಿ ಹಳೇ ವಿದ್ಯಾರ್ಥಿಗಳ ಛಲ.. ಸಿಕ್ಕಿತು ಬಂಗಾರದ ಫಲ! - ಶಾಲೆಯ ಅಭಿವೃದ್ಧಿಗೆ ಸಿಕ್ಕಿತು ಬಂಗಾರದ ಫಲ

ಉಡುಪಿ ನಿಟ್ಟೂರು ಶಾಲೆ ಆರಂಭವಾಗಿ 50 ವರ್ಷ ತುಂಬಿದ ಹಿನ್ನೆಲೆ, ಈ ಶಾಲೆಯ ಹಳೇ ವಿದ್ಯಾರ್ಥಿಗಳು ಒಂದು ಅರ್ಥಪೂರ್ಣ ಕಾರ್ಯ ಮಾಡಿದ್ದಾರೆ. ಅದೇನೆಂದರೆ 50 ವರ್ಷ ತುಂಬಿದ ಹಿನ್ನೆಲೆ 50 ಎಕರೆ ಹಡಿಲು ಗದ್ದೆಗಳ ಪುನಶ್ಚೇತನ ಮಾಡುವುದು. ಸದ್ಯ ಈ ಎಲ್ಲಾ ಕಾರ್ಯಗಳನ್ನು ಮುಗಿಸಿ 13 ಟನ್ ಅಕ್ಕಿ ಬೆಳೆದು ಲಾಭದಲ್ಲಿನ ಸ್ವಲ್ಪ ಪಾಲನ್ನು ಶಾಲೆಯ ಅಭಿವೃದ್ಧಿಗೆ ನೀಡಿದ್ದಾರೆ.

ಬಂಗಾರದ ಫಲ
ಬಂಗಾರದ ಫಲ

By

Published : Nov 19, 2020, 10:06 AM IST

Updated : Nov 19, 2020, 12:46 PM IST

ಉಡುಪಿ:ಉಡುಪಿ ನಿಟ್ಟೂರು ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘವೊಂದು, ತಾವು ವಿದ್ಯೆ ಕಲಿತ ಶಾಲೆಯನ್ನು ಅಭಿವೃದ್ಧಿ ಮಾಡುವುದರ ಜೊತೆಗೆ ಹೇಗೆ ಕೃಷಿಗೆ ಉತ್ತೇಜನ ನೀಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಇಲ್ಲಿನ ನಿಟ್ಟೂರು ಶಾಲೆ ಆರಂಭವಾಗಿ 50 ವರ್ಷ ತುಂಬಿದ ಹಿನ್ನೆಲೆ ಈ ವರ್ಷ ಸುವರ್ಣ ಸಂಭ್ರಮದ ಆಚರಣೆ ನಡೆಯಬೇಕಿತ್ತು. ಆದರೆ ಕೊರೊನಾ ಮಹಾಮಾರಿಯಿಂದಾಗಿ ಅದ್ಧೂರಿ ಆಚರಣೆ ಬದಿಗೆ ಸರಿದು ಒಂದು ಅರ್ಥಪೂರ್ಣ ಕಾರ್ಯಕ್ರಮ ರೂಪುಗೊಂಡಿದೆ. ಅದೇನೆಂದರೆ 50 ವರ್ಷ ತುಂಬಿದ ಹಿನ್ನೆಲೆ 50 ಎಕರೆ ಹಡಿಲು ಗದ್ದೆಗಳ ಪುನಶ್ಚೇತನ ಕಾರ್ಯ, ಇದರಲ್ಲಿ ಭಾಗಿಯಾಗಿದ್ದ ನಿಟ್ಟೂರು ಶಾಲೆಯ ಹಳೆಯ ವಿದ್ಯಾರ್ಥಿಗಳು ಹಡಿಲು ಬಿದ್ದ ಭತ್ತದ ಗದ್ದೆಯಲ್ಲಿ ಮತ್ತೆ ವ್ಯವಸಾಯ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಶಾಲೆಯ ಅಭಿವೃದ್ಧಿಗಾಗಿ ಹಳೇ ವಿದ್ಯಾರ್ಥಿಗಳ ಛಲ

ಇತ್ತೀಚೆಗೆ ತನ್ನ ನಿವೃತ್ತಿಯ ಸಮಯದಲ್ಲಿ ಬಡ ವಿದ್ಯಾರ್ಥಿನಿವೋರ್ವಳಿಗೆ ಮನೆ ಕಟ್ಟಿಸಿ ಸುದ್ದಿಯಾದ ಮುರಳಿ ಕಡೇಕಾರ್ ಅವರು ಈ ಅದ್ಭುತ ಯೋಜನೆಯ ಸಂಯೋಜಕರು. ಇವರು ತನ್ನ ಹಳೇ ವಿದ್ಯಾರ್ಥಿಗಳನ್ನೆಲ್ಲ ಒಟ್ಟುಗೂಡಿಸಿ ತಮ್ಮ ಸುತ್ತಮುತ್ತ ಬರಡು ಬಿದ್ದಿರುವ ಗದ್ದೆಗಳನ್ನು ಗುರುತಿಸಲು ಹೇಳಿದ್ದಾರೆ. ನಿಟ್ಟೂರು, ಪುತ್ತೂರು, ಕರಂಬಳ್ಳಿ, ಪೆರಂಪಳ್ಳಿ, ಕಕ್ಕುಂಜೆ ಪರಿಸರದಲ್ಲಿ ಅನೇಕ ಗದ್ದೆಗಳು ಹಡಿಲು ಇರುವುದು ಗಮನಕ್ಕೆ ಬಂದಿದೆ. ಎಲ್ಲಾ ಗದ್ದೆಗಳ ಮಾಲೀಕರನ್ನು ವಿಶ್ವಾಸಕ್ಕೆ ಪಡೆದು ಆ ಗದ್ದೆಗಳಲ್ಲಿ ಇದ್ದ ಗಿಡಗಂಟಿ, ಕಸಕಡ್ಡಿಗಳನ್ನು ಸ್ವಚ್ಛ ಮಾಡಿ ಹೊಸದಾಗಿ ನೀರಿನ ತೋಡುಗಳನ್ನು ನಿರ್ಮಿಸಿ, ಆ ಭೂಮಿಯನ್ನು ಕೃಷಿಯೋಗ್ಯಗೊಳಿಸಲಾಯಿತು.

ಕಳೆದ ಏಳು ತಿಂಗಳಿನಿಂದ ಹಳೇ ವಿದ್ಯಾರ್ಥಿಗಳೇ ಉತ್ತಿ ಬಿತ್ತಿ ಬೆವರು ಸುರಿಸಿ ಭತ್ತ ಬೆಳೆದು, ಸದ್ಯ ಅದನ್ನು ಮಿಲ್‌ನಲ್ಲಿ ಕೆಂಪಕ್ಕಿಯನ್ನು ಮಾಡಿದ್ದಾರೆ. ಯಾವುದೇ ರೀತಿಯ ರಾಸಾಯನಿಕ ಗೊಬ್ಬರ ಕೀಟನಾಶಕವನ್ನು ಬಳಸದೇ ಅಕ್ಕಿಯನ್ನು ಬೆಳೆಯಲಾಗಿದೆ. ಪ್ರತಿ ಕೆ.ಜಿಗೆ 50 ರೂ.ಇದೆ. ಒಟ್ಟು 13 ಟನ್ ಅಕ್ಕಿ ಬೆಳೆಯಲಾಗಿದ್ದು, ಅದರಲ್ಲಿ ಬಂದ ಲಾಭದ ಮೊತ್ತವನ್ನು ಗದ್ದೆಯ ಮಾಲೀಕರಿಗೆ ನೀಡುವ ಯೋಚನೆ ಇದೆ. ಉಳಿದ ಹಣ ಶಾಲೆಯ ಅಭಿವೃದ್ಧಿಗೆ ಬಳಸಿಕೊಳ್ಳಲು ನೀಡಲಾಗುವುದು. ವಿಶೇಷ ಎಂದರೆ ಗದ್ದೆಯಲ್ಲಿ ಉತ್ತಮ ಫಸಲು ಬರುವಲ್ಲಿ ಅವಿರತ ಪ್ರಯತ್ನ ಮಾಡಿದ ಹಳೆ ವಿದ್ಯಾರ್ಥಿಗಳು ತಾವು ಬೆಳೆದ ಬೆಳೆಯನ್ನು ಹಣ ಕೊಟ್ಟು ಖರೀದಿಸಿದ್ದಾರೆ. ಏಕೆಂದರೆ ತಮ್ಮ ಶಾಲೆಯ ಅಭಿವೃದ್ಧಿಗಾಗಿ ಎಂದು ತಿಳಿಸಿದ್ದಾರೆ.

Last Updated : Nov 19, 2020, 12:46 PM IST

ABOUT THE AUTHOR

...view details