ಉಡುಪಿ: 20 ವರ್ಷಗಳಿಗೊಮ್ಮೆ ಗೋಚರಿಸುವ ಗುರು ಮತ್ತು ಶನಿಯ ಅಪರೂಪದ ಜೋಡಿಯ ಸುಂದರ ಸಮಾಗಮ ಇಂದು ಸಂಜೆ ಗೋಚರಿಸಲಿದೆ. ಸಂಜೆ 6.15 ರಿಂದ 8 ರವರೆಗೆ ಗುರು ಮತ್ತು ಶನಿ ಗ್ರಹಗಳ ಸಾಮೀಪ್ಯವನ್ನು ಕಣ್ತುಂಬಿಕೊಳ್ಳಬಹುದು.
ಗುರು ಹಾಗು ಶನಿಯ ಸಾಮೀಪ್ಯವನ್ನು ಒಂದು ವಿಶೇಷವಾದ ಖಗೋಳ ವಿದ್ಯಮಾನ ಎನ್ನಬಹುದಾಗಿದ್ದು, ಇದನ್ನು ಗ್ರೇಟ್ ಕಂಜಂಕ್ಷನ್ ಎನ್ನಲಾಗುತ್ತದೆ. ಭೂಮಿಯಿಂದ ಸೂರ್ಯನಿಗಿರುವ ದೂರದ 5ರಷ್ಟು ದೂರದಲ್ಲಿ ಗುರುಗ್ರಹವಿದ್ದು, ಗುರುವು ಸೂರ್ಯನ ಸುತ್ತ ಪರಿಭ್ರಮಿಸಲು 11.86 ವರ್ಷ ಬೇಕು. ಶನಿಯು ಭೂಮಿ ಹಾಗೂ ಸೂರ್ಯನ ನಡುವಿನ ಅಂತರದ 2ರಷ್ಟು ದೂರದಲ್ಲಿದ್ದು, ಪರಿಭ್ರಮಿಸಲು 29.46 ವರ್ಷಗಳು ಬೇಕು. ಈ ಎರಡು ಗ್ರಹಗಳು ಸಮೀಪಿಸಲು ಕನಿಷ್ಠ 20 ವರ್ಷಗಳು ಬೇಕು ಎಂದು ಉಡುಪಿ ಪೂರ್ಣಪ್ರಜ್ಞ ಕಾಲೇಜು ಭೌತಶಾಸ್ತ್ರ ಉಪನ್ಯಾಸಕ ಅತುಲ್ ಭಟ್ ಹೇಳಿದ್ದಾರೆ.
ಗುರು ಹಾಗೂ ಶನಿ ಗ್ರಹಗಳು ಒಂದೇ ಸಮತಲದಲ್ಲಿ ಪರಿಭ್ರಮಿಸುವುದಿಲ್ಲ. ಪ್ರತಿ ಸಮಾಗಮದಲ್ಲಿ ಅಂತರವು ಬದಲಾಗುತ್ತಿರುತ್ತದೆ. ಖಗೋಳಶಾಸ್ತ್ರದಲ್ಲಿ ಈ ಅಂತರಗಳನ್ನು ಕೋನಾಂತರದಲ್ಲಿ ಅಳೆಯಲಾಗುತ್ತದೆ. ಮದುವೆ ಸಮಾರಂಭಗಳಲ್ಲಿ ವರನು ವಧುವಿಗೆ ಅರುಂಧತಿ ಹಾಗು ವಸಿಷ್ಠ ನಕ್ಷತ್ರಗಳನ್ನು ತೋರಿಸುವ ಶಾಸ್ತ್ರವಿದೆ. ಅಲ್ಲಿ ಎರಡು ನಕ್ಷತ್ರಗಳು ತುಂಬ ಹತ್ತಿರದಲ್ಲಿ ಜೋಡಿ ನಕ್ಷತ್ರಗಳಂತೆ ಕಾಣುತ್ತದೆ. ಇವುಗಳ ನಡುವಿನ ಅಂತರ 0.2 ಡಿಗ್ರಿಗಳಿರುತ್ತದೆ. ಆದರೆ, ಈಗ ಕಾಣುವ ಗುರು ಶನಿ ಗ್ರಹದ ನಡುವಿನ ಅಂತರ ಅರುಂಧತಿ ಹಾಗೂ ವಸಿಷ್ಠ ನಕ್ಷತ್ರಗಳ ಅಂತರದ ಅರ್ಧದಷ್ಟಿರುತ್ತದೆ (0.1) ಎಂದು ಖಗೋಳಶಾಸ್ತ್ರಜ್ಞ ಡಾ. ಎ ಪಿ ಭಟ್ ಮಾಹಿತಿ ನೀಡಿದ್ದಾರೆ.