ಉಡುಪಿ: ಸರ್ಕಾರ ಬಹುಮತ ಕಳೆದುಕೊಂಡಿರೋದು ಖಚಿತವಾಗಿದೆ. ಬಹುಮತ ಇಲ್ಲದ ಪಕ್ಷವನ್ನು ಸದನದಲ್ಲಿ ಬಿಜೆಪಿ ಎದುರಿಸಬೇಕಾಗಿದೆ. ನೆಪಗಳನ್ನು ಹೇಳದೆ ಸಿಎಂ ಕುಮಾರಸ್ವಾಮಿ ತಕ್ಷಣ ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿಯಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕೋಪಯೋಗಿ ಮಂತ್ರಿ 800 ಇಂಜಿನಿಯರ್‌ಗಳ ವರ್ಗಾವಣೆ ಮಾಡಿದ್ದಾರೆ. ಬಹುಮತ ಕಳೆದುಕೊಂಡ ಸರ್ಕಾರದ ಮಂತ್ರಿಯಿಂದ ಅಕ್ರಮವಾಗಿದೆ. ಪೊಲೀಸ್ ಇಲಾಖೆಯ ವರ್ಗಾವಣೆ ತಡೆಹಿಡಿಯಲಾಗಿದೆ. ಇಂಜಿನಿಯರ್‌ಗಳ ವರ್ಗಾವಣೆಯನ್ನೂ ತಕ್ಷಣ ತಡೆ ಹಿಡಿಯಬೇಕು ಅಂತಾ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್‌ಗೆ ಕೋಟ ಶ್ರೀನಿವಾಸ್ ಪೂಜಾರಿ ಒತ್ತಾಯಿಸಿದ್ದಾರೆ.
ಸರ್ಕಾರ ಬಹುಮತವಿಲ್ಲದೆ ಬೀಳೋದು ಖಚಿತ.. ಕೋಟ ಶ್ರೀನಿವಾಸ ಪೂಜಾರಿ ರಾಜ್ಯದಲ್ಲಿ ಉಂಡೂ ಹೋದ ಕೊಂಡೂ ಹೋದ ಸರ್ಕಾರ ನಡೀತಿದೆ. ರೇವಣ್ಣ ಹಸ್ತಕ್ಷೇಪ ಮಾಡಿ ಸಾವಿರಾರು ಕೋಟಿ ದಂಧೆ ಮಾಡಿದ್ದಾರೆ ಅಂತಾ ಸ್ವತಃ ಶಾಸಕ ಮುನಿರತ್ನ ಆರೋಪಿಸುತ್ತಿದ್ದಾರೆ. ಸುಪ್ರೀಂಕೋರ್ಟ್ ವ್ಯಾಪ್ತಿಯನ್ನು ಸ್ಪೀಕರ್ ಪ್ರಶ್ನೆ ಮಾಡಿದ್ದಾರೆ. ಯಡಿಯೂರಪ್ಪ ವಿಶ್ವಾಸಮತ ಸಂದರ್ಭದಲ್ಲಿ ವಿಪಕ್ಷವಾಗಿ ನಡುರಾತ್ರಿ ಕೋರ್ಟ್ ಮೆಟ್ಟಿಲೇರಿದ್ರು. 48 ಗಂಟೆಯಲ್ಲಿ ಬಹುಮತ ಸಾಬೀತು ಮಾಡುವ ನಿರ್ದೇಶನ ಪಡೆದಿದ್ರು. ಅಂದು ನೀವು ಸುಪ್ರೀಂ ಆದೇಶ ಪಾಲನೆ ಮಾಡಿಲ್ವಾ. ಈಗ್ಯಾಕೆ ಸುಪ್ರೀಂ ಮಧ್ಯ ಪ್ರವೇಶಕ್ಕೆ ಆಕ್ಷೇಪ ವ್ಯಕ್ತ ಮಾಡ್ತೀರಿ? ಅಂತಾ ಪೂಜಾರಿ ಗರಂ ಆಗಿದ್ದಾರೆ.
ಡಿಕೆಶಿ ಎಷ್ಟೇ ಒತ್ತಡ ತಂದ್ರೂ ಎಂಟಿಬಿ ನಾಗರಾಜ್ ಬದಲಾಗೋಲ್ಲ ಅನ್ನೋ ವಿಶ್ವಾಸ ಇದೆ ಅಂತಾ ಹೇಳಿದ ಅವರು, ಸಚಿವ ಸಾ ರಾ ಮಹೇಶ್ ಮತ್ತು ಮಾಜಿ ಡಿಸಿಎಂ ಈಶ್ವರಪ್ಪ ಭೇಟಿ ಕೇವಲ ಆಕಸ್ಮಿಕ. ರಾತ್ರಿ ಕಂಡ ಬಾವಿಗೆ ಹಗುಲು ಹೋಗಿ ಬೀಳ್ತೀವಾ? ಅಂತಾ ಅವರು ಹೇಳಿದ್ರು. ಸರ್ಕಾರ ಶಾಸಕರ ಮೇಲೆ ಎಸಿಬಿ ಪ್ರಯೋಗ ಮಾಡಿ ಒತ್ತಡ ಹೇರಲು ಪ್ರಯತ್ನ ಮಾಡುತ್ತಿದೆ. ಎಸಿಬಿ ಮುಖ್ಯಸ್ಥರಾಗಿ ಹೇಮಂತ್ ನಿಂಬಾಳ್ಕರ್ ಇದ್ದಾರೆ. ರಾಜೀನಾಮೆ ಕೊಟ್ಟ ಶಾಸಕರನ್ನು ಬಗ್ಗುಬಡಿಯಲು ಎಸಿಬಿ ಬಳಸಲಾಗುತ್ತಿದೆ ಆತಂಕ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರಿಗೆ ವಿರೋಧ ಪಕ್ಷ ನಾಯಕನಾಗಿರೋದೇ ಉತ್ತಮ ಅಂತಾ ಅನಿಸಿದೆ. ಕಾಂಗ್ರೆಸ್ ಉಳಿಯಲು ಜೆಡಿಎಸ್ಗೆ ನೀಡಿದ ಬೆಂಬಲ ವಾಪಸು ಪಡೆಯಲೇಬೇಕು. ಬುಧವಾರ ವಿಶ್ವಾಸಮತ ಸಾಬೀತು ಅಸಾಧ್ಯ. ರಾಜ್ಯ ಸರ್ಕಾರ ಬೀಳುವುದು ಖಚಿತ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.