ಉಡುಪಿ: ಜಿಲ್ಲೆಯ ಕುಂದಾಪುರದಲ್ಲಿ ನಿವೇಶನರಹಿತ ಬಡವರಿಗೆ ಮನೆ ನಿರ್ಮಿಸಿಕೊಳ್ಳಲು ಒಂದಿಷ್ಟು ಸರ್ಕಾರಿ ಜಮೀನು ಇದೆ. ಆದ್ರೆ ಈ ಜಮೀನುಗಳು ನಿಜಾರ್ಥದಲ್ಲಿ ನಿವೇಶನರಹಿತರಿಗೆ ಸಿಕ್ತಾ ಇಲ್ಲ. ಅಕ್ರಮ ಸಕ್ರಮ ಯೋಜನೆಯಡಿಯಲ್ಲಿ ಸ್ವತಃ ಜಮೀನು ಇರೋ ಮಾಲೀಕರೇ ಒಳಬಾಗಿಲಿನಿಂದ ಅರ್ಜಿ ಸಲ್ಲಿಸಿ ಕಂದಾಯ ಅಧಿಕಾರಿಗಳ ಕೃಪಕಟಾಕ್ಷದೊಂದಿಗೆ, ಜನಪ್ರತಿನಿಧಿಗಳ ಪ್ರಭಾವ, ಹಣದ ಬಲದೊಂದಿಗೆ ಕಾನೂನನ್ನು ಗಾಳಿಗೆ ತೂರಿ ಭೂಮಿ ಮಂಜೂರಾತಿ ಮಾಡಿಸಿಕೊಳ್ಳುತ್ತಿದ್ದಾರೆ.
ಕೊರ್ಗಿ ಗ್ರಾಮದ ಮೂಡುಕೊರ್ಗಿಯ ನಿವಾಸಿ ರಾಜೀವಿ ಶೆಟ್ಟಿಯವರಿಗೆ ಹಿರಿಯರಿಂದ ಬಂದ ಜಮೀನು, ಮನೆಯಲ್ಲಿ ಒಬ್ಬ ಸರ್ಕಾರಿ ನೌಕರ ಇದ್ದರೂ, ಕೋವಿಡ್ ಗಡಿಬಿಡಿಯಲ್ಲಿ ನಿವೃತ್ತಿ ಅಂಚಿನಲ್ಲಿದ್ದ ಕುಂದಾಪುರ ತಹಶೀಲ್ದಾರ್ ಮೂಲಕ ಕೊನೆಗಳಿಗೆಯಲ್ಲಿ ಆರ್ಸಿಸಿ ಕಟ್ಟಡದ ಮನೆಗೆ ಜಮೀನು ಮಂಜೂರಾತಿ ಮಾಡಿಸಿಕೊಂಡಿದ್ದಾರೆ. ನೂರಾರು ಜನರ ವಿರೋಧದ ಪತ್ರಗಳಿದ್ದರೂ ತಹಶೀಲ್ದಾರ್ ರಸ್ತೆ ಷರತ್ತಿನ ಮೇರೆಗೆ ಜಮೀನು ಮಂಜೂರು ಮಾಡಿದ್ದಾರೆ.