ಉಡುಪಿ: ಜಿಲ್ಲೆಯ ಯೋಗಸಾಧಕಿ ಜಗತ್ತೇ ಬೆರಗುಗಣ್ಣಿನಿಂದ ನೋಡುವಂತಹ ಸಾಧನೆ ಮಾಡಿದ್ದಾಳೆ. ದೇಹದೊಳಗೆ ಮೂಳೆಯೇ ಇಲ್ಲದವಳಂತೆ ಲೀಲಾಜಾಲವಾಗಿ ತಿರುಗುವ ಈಕೆ, ಅತೀ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ಯೋಗಾಸನ ಭಂಗಿಗಳನ್ನು ಮಾಡುವ ಮೂಲಕ 'ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್ಸ್' ನಲ್ಲಿ ಹೆಸರು ದಾಖಲಿಸಿದ್ದಾಳೆ ತನುಶ್ರೀ ಪಿತ್ರೋಡಿ.
ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್ಸ್:
ಇದು ಈಕೆ ಮಾಡುತ್ತಿರುವ ಏಳನೇ ವಿಶ್ವ ದಾಖಲೆ. ತನುಶ್ರೀಗೆ ಈಗಿನ್ನೂ ಹನ್ನೆರಡರ ಹರೆಯ. ಎಂಥಾ ಉತ್ಸಾಹ, ಅದೆಂಥಾ ಲವಲವಿಕೆ. ಉಡುಪಿ ಜಿಲ್ಲೆಯ ಉದ್ಯಾವರದ ಈ ಬಾಲಕಿ ಯೋಗವನ್ನೇ ಉಂಡು, ಉಟ್ಟು ಉಸಿರಾಡುವ ಪೋರಿ. ಈಕೆಯ ಮುಡಿಗಿದೆ ಆರು ವಿಶ್ವದಾಖಲೆಗಳ ಗರಿ. ಇದೀಗ ಮತ್ತೊಂದು ದಾಖಲೆ ಬರೆದಿದ್ದಾಳೆ. ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್ಸ್ ನಲ್ಲಿ ಈಕೆಯ ಈ ಸಾಧನೆ ದಾಖಲಾಗಿದೆ.
ಏಳನೇ ವಿಶ್ವ ದಾಖಲೆ ಬರೆದ ಯೋಗ ಸಾಧಕಿ ತನುಶ್ರೀ..! 43 ನಿಮಿಷ 18 ಸೆಕೆಂಡ್ಗಳಲ್ಲಿ 245 ಆಸನಗಳು:
ಸ್ವಾತಂತ್ರ್ಯೋತ್ಸವದ 75ನೇ ದಿನಾಚರಣೆಯ ಸಂದರ್ಭದಲ್ಲಿ ಈ ಯೋಗ ದಾಖಲೆ ಸದ್ದು ಮಾಡಿದೆ. ಈಕೆಗೆ ಒಂದು ಗಂಟೆಯ ಅವಧಿಯಲ್ಲಿ 200 ಯೋಗಾಸನಗಳನ್ನು ಮಾಡುವ ಟಾರ್ಗೆಟ್ ನೀಡಲಾಗಿತ್ತು. ಆದರೆ, ಕೇವಲ 43 ನಿಮಿಷ 18 ಸೆಕೆಂಡ್ಗಳಲ್ಲಿ 245 ಆಸನಗಳನ್ನು ಮಾಡುವ ಮೂಲಕ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾಳೆ. ಇಲ್ಲಿ ಪ್ರದರ್ಶನವಾದ ಪ್ರತಿಯೊಂದು ಆಸನಗಳೂ ಒಂದಕ್ಕಿಂತ ಮತ್ತೊಂದು ಕಠಿಣವಾಗಿದ್ದವು ಅನ್ನೋದು ವಿಶೇಷ.
ಏಳನೇ ವಿಶ್ವದಾಖಲೆ:
2017ರಲ್ಲಿ ತನುಶ್ರೀ ಯೋಗದ ನಿರಾಲಂಭ ಪೂರ್ಣ ಚಕ್ರಾಸನವನ್ನು ಒಂದೇ ನಿಮಿಷದಲ್ಲಿ 19 ಬಾರಿ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ್ದಳು. 2018ರಲ್ಲಿ ದೇಹದ ಎದೆಯ ಭಾಗ ಹಾಗೂ ತಲೆಯನ್ನು ಸ್ಥಿರವಾಗಿ ಇರಿಸಿ ಉಳಿದ ಭಾಗವನ್ನು ನಿಮಿಷಕ್ಕೆ 41 ಬಾರಿ ತಿರುಗಿಸುವ ಮೂಲಕ ಇನ್ನೊಂದು ಗಿನ್ನೆಸ್ ದಾಖಲೆ ಬರೆದಿದ್ದಳು. ಧನುರ್ ಆಸನದಲ್ಲಿ ಎರಡು ಬಾರಿ, ಚಕ್ರಾಸನ ರೇಸ್ ವಿಭಾಗ ಮತ್ತು ಮೋಸ್ಟ್ ಬಾಡಿ ಸ್ಕಿಪ್ ವಿಭಾಗಗಳಲ್ಲಿ ಮಾಡಿರುವ ಸಾಧನೆ ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್ನಲ್ಲಿ ದಾಖಲಾಗಿದೆ. ಈಗ ದಾಖಲಾಗಿರೋದು ಏಳನೇ ವಿಶ್ವದಾಖಲೆ ಅನ್ನೋದು ಈಕೆಯ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ದಾಖಲೆ ನಿರ್ಮಿಸಿದ ತನುಶ್ರೀ ಪಿತ್ರೋಡಿ ತಾಯಿಯ ಮಾರ್ಗದರ್ಶನದಲ್ಲಿ ನಿತ್ಯ ಅಭ್ಯಾಸ:
ಯೋಗಕ್ಕೆಂದು ಈಕೆ ಹೆಚ್ಚೇನೂ ತರಬೇತಿ ಪಡೆದವಳಲ್ಲ. ಪ್ರತೀ ಆಸನವನ್ನೂ ಯೂಟ್ಯೂಬ್ನಲ್ಲಿ ವೀಕ್ಷಿಸಿ ತಾಯಿಯ ಮಾರ್ಗದರ್ಶನದಲ್ಲಿ ನಿತ್ಯ ಅಭ್ಯಾಸ ಮಾಡಿದ್ದಾಳೆ. ಸತತ ಅಭ್ಯಾಸದ ನಂತರ ಈಗ ಸಾಧನೆಯ ಪುಟದಲ್ಲಿ ಹೆಸರು ಬರೆದಿದ್ದಾಳೆ. ತಂದೆ ಉದಯ ಕುಮಾರ್ ಮತ್ತು ತಾಯಿ ಸಂಧ್ಯಾ ಅವರ ಗರಡಿಯಲ್ಲಿ ಮನೆಯಲ್ಲಿಯೇ ನಿರಂತರ ಅಭ್ಯಾಸ ನಡೆಸುತ್ತಿರುವ ತನುಶ್ರೀ, ಉಡುಪಿ ಸೈಂಟ್ಸಿಸಿಲೀಸ್ ಶಾಲೆಯಲ್ಲಿ 8 ನೇ ತರಗತಿ ಓದುತ್ತಿದ್ದಾಳೆ. ನೃತ್ಯದಲ್ಲೂ ಇವಳು ನಿಪುಣೆ, ಹಾಗಾಗಿ ಈಕೆಯ ಯೋಗ ಭಂಗಿಗಳಲ್ಲಿ ನೃತ್ಯದ ನಾಜೂಕುತನವೂ ಇದೆ.