ಕುಂದಾಪುರ(ಉಡುಪಿ): ಶಾಲೆಯಿಂದ ಮನೆಗೆ ತೆರಳುತ್ತಿದ್ದ ವೇಳೆ ಕಾಲುಸಂಕ ದಾಟುವಾಗ ಆಯತಪ್ಪಿ ಹಳ್ಳಕ್ಕೆ ಬಿದ್ದು, ಎರಡನೇ ತರಗತಿ ವಿದ್ಯಾರ್ಥಿನಿಯೋರ್ವಳು ನೀರುಪಾಲಾಗಿದ್ದಾಳೆ. ಈ ಘಟನೆ ಸೋಮವಾರ ಸಂಜೆ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಬಿಜಮಕ್ಕಿ ಸಮೀಪ ನಡೆದಿದೆ. ಬೊಳಂಬಳ್ಳಿಯ ಮಕ್ಕಿಮನೆ ಪ್ರದೀಪ ಪೂಜಾರಿ ಹಾಗೂ ಸುಮಿತ್ರಾ ಅವರ ಪುತ್ರಿ ಸನ್ನಿಧಿ (7) ನೀರುಪಾಲಾಗಿರುವ ಬಾಲಕಿ.
ಸಂಜೆ ಶಾಲೆಯಿಂದ ಮನೆಗೆ ತೆರಳುತ್ತಿದ್ದಾಗ ಬಿಜಮಕ್ಕಿ ಎಂಬಲ್ಲಿ ಕಾಲು ಸಂಕ ದಾಟುವಾಗ ಬಾಲಕಿ ಆಯತಪ್ಪಿ ಹಳ್ಳಕ್ಕೆ ಬಿದ್ದಿದ್ದಾಳೆ. ಕೂಡಲೇ ವಿಷಯ ತಿಳಿದು ಸಾರ್ವಜನಿಕರು ಹುಡುಕಾಟ ಆರಂಭಿಸಿದ್ದಾರೆ. ಈ ಹಳ್ಳ ಬೊಳಂಬಳ್ಳಿ ನದಿಗೆ ಸೇರುತ್ತಿದೆ. ನೀರಿನ ಸೆಳೆತಕ್ಕೆ ಸನ್ನಿಧಿ ಕೊಚ್ಚಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. ನಾಪತ್ತೆಯಾದ ಬಾಲಕಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.