ಉಡುಪಿ: ಎಲ್ಲವೂ ಅಂದುಕೊಂಡಂತೆ ನಡೆದಿದ್ರೆ ಆಕೆ ಹಸೆಮಣೆ ಏರಲು ರೆಡಿಯಾಗಿರುತ್ತಿದ್ಲು. ಆದ್ರೆ ನಡೆದದ್ದೇ ಬೇರೆ. ಯಾಕಂದ್ರೆ ಮದುವೆಯಾಗಬೇಕಿದ್ದ ಹುಡುಗ ದೊಡ್ಡ ಸೈಕೋ. ದೈಹಿಕವಾಗಿ ಹಾಗೂ ಮಾನಸಿಕವಾಗಿ ಮದುವೆ ಮೊದಲೇ ಹಿಂಸೆ ನೀಡುತ್ತಿದ್ದ. ಯುವತಿ ಮನೆಯವರಲ್ಲೂ ವರದಕ್ಷಿಣೆಗಾಗಿ ಒತ್ತಾಯಿಸುತ್ತಿದ್ದ. ಅದ್ಯಾವುದು ನಡೆಯದೇ ಹೋದಾಗ ನಿಶ್ಚಿತಾರ್ಥ ಮಾಡಿಕೊಂಡ ಯುವತಿಗೆ ಕೈಕೊಟ್ಟ ಎನ್ನಲಾಗ್ತಿದೆ. ಯುವಕನ ನಡತೆಯಿಂದ ಬೇಸತ್ತ ಯುವತಿ ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಬೈಂದೂರು ತಾಲೂಕಿನ ನಾಡ ಪಡುಕೋಣೆ ನಿವಾಸಿಯಾಗಿರೋ 26 ರ ಹರೆಯದ ಯುವತಿ ನೋಡಲು ಸುಂದರಿ ಹಾಗೂ ತಂದೆ ತಾಯಿಯ ಮುದ್ದಿನ ಮಗಳು. ಆದರೆ ಹಸಿ ಹಸಿ ಸುಳ್ಳು ಹೇಳಿ ಮ್ಯಾಟ್ರಿಮೋನಿ ವೆಬ್ಸೈಟ್ನಲ್ಲಿ ಪರಿಚಯವಾದ 28 ವರ್ಷದ ಯುವಕ ಗೋವರ್ಧನ್ ತನ್ನ ಜೀವನ ಸಂಗಾತಿಯಾಗುತ್ತಾನೆ ಅಂದುಕೊಂಡಿದ್ಲು. ಆದರೆ ತನ್ನ ಜೀವ ಹೋಗಲು ಆತನೇ ಕಾರಣನಾಗಿತ್ತಾನೆಂದು ಆಕೆ ಊಹೆ ಕೂಡ ಮಾಡಿರಲಿಲ್ಲ. ಈತ ಪಕ್ಕಾ 420. ಮ್ಯಾಟ್ರಿಮೋನಿಯಲ್ಲಿ ಆ ಯುವತಿಗೆ ಮದುವೆ ಪ್ರಸ್ತಾಪ ಇಟ್ಟ ಗೋವರ್ಧನ್, ಮಾತುಕತೆ ಬಳಿಕ ಹುಡಗಿ ಮನೆಗೆ ಹೆಣ್ಣು ನೋಡಲು ಬರುವಾಗಲೇ ಯಾರದ್ದೋ ಕಾರಿನಲ್ಲಿ ಬಂದು ತನ್ನ ಕಾರು ಎಂಬಂತೆ ಪೋಸು ಕೊಟ್ಟಿದ್ದ. ಬಳಿಕ ಉಡುಪಿಯಲ್ಲಿರೋ ಸ್ನೇಹಿತನ ಫ್ಲಾಟ್ ಅನ್ನು ತನ್ನ ಫ್ಲಾಟ್ ಅಂತ ಸುಳ್ಳು ಹೇಳಿದ್ದ. ಅದಾದ ಬಳಿಕ ಆನ್ಲೈನ್ ಸೇಲ್ಸ್ ಉದ್ಯಮ ಮಾಡುತ್ತಿದ್ದೇನೆ ಅಂತ ಯಾರದ್ದೋ ಮಳಿಗೆಯನ್ನೇ ತನ್ನ ಕಚೇರಿ ಎಂದು ತೋರಿಸಿ ಯುವತಿ ಮನೆಯವರಿಗೆ ನಂಬಿಸಿದ್ದ. ಅದೇಗೋ ಈ ಆರೋಪಿ, ಹುಡುಗಿಯ ಕುಟುಂಬವನ್ನ ಯಾಮಾರಿಸಿ ಮದುವೆಗೆ ಗ್ರೀನ್ ಸಿಗ್ನಲ್ ಗಿಟ್ಟಿಸಿದ್ದ ಎನ್ನಲಾಗ್ತಿದೆ.