ಕುಂದಾಪುರ: ಹಿಂದೂ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ನಡೆಯುತ್ತಿರುವ ಸಪ್ತಪದಿ ಕಾರ್ಯಕ್ರಮವು ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ನಡೆಯಿತು.
ಈ ವೇಳೆ ನಾಲ್ಕು ಜೋಡಿಗಳು ಮೂಕಾಂಬಿಕಾ ಸನ್ನಿಧಿಯಲ್ಲಿ ಹಸೆಮಣೆ ಏರಿದರು. ದೇವಾಲಯದ ಹೊರಭಾಗದ ವೇದಿಕೆಯಲ್ಲಿ ದೀಪ ಪ್ರಜ್ವಲಿಸಿ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿಯವರು ಕಾರ್ಯಕ್ರಮ ಉದ್ಘಾಟಿಸಿದರು. ಕ್ಷೇತ್ರ ಪುರೋಹಿತರಾದ ಗಜಾನನ ಜೋಶಿಯವರ ನೇತೃತ್ವದಲ್ಲಿ ಧಾರ್ಮಿಕ ವಿಧಾನಗಳು ನಡೆದು, ಬುಧವಾರ ಬೆಳಗ್ಗಿನ ಮೀನ ಲಗ್ನ 11.10 ರ ಸುಮುಹೂರ್ತದಲ್ಲಿ ನವ ವಧು ವರರು ಸಪ್ತಪದಿ ತುಳಿದು ಹೊಸ ಜೀವನಕ್ಕೆ ಕಾಲಿಟ್ಟರು.
ಎರಡು ಜೋಡಿಗಳು ಅಂತರ್ಜಾತಿ ವಿವಾಹವಾದರು. ಕುಂದಾಪುರ ಜಪ್ತಿಯ ಪ್ರಶಾಂತ್ ಪೂಜಾರಿ, ಸೌಕೂರು ನಂದಿನಿ ದೇವಾಡಿಗ ಜೋಡಿ ಹಾಗೂ ಬೈಂದೂರು ಕೆರ್ಗಾಲಿನ ಶ್ರೀಧರ ಪೂಜಾರಿ, ಉಡುಪಿಯ ಮಣಿಪ್ರಭ ಶೆಟ್ಟಿಯವರು ಹಸೆಮಣೆ ಏರಿದರು. ಗುಜರಾತ್‌ನ ಶ್ರೀಪಾದ್ ಪಾಲಂಕರ್, ಅಂಕೋಲದ ಪಲ್ಲವಿ ಜೋಡಿ ಮತ್ತು ಯಾಣದ ಗಜಾನನ, ಕುಮಾಟದ ಶಾರದ ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟರು.