ಉಡುಪಿ:ಉಡುಪಿಯಲ್ಲಿ ಇಂದು ಮತ್ತೆ 73 ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು ಜಿಲ್ಲೆಯ ಜನ ಭಯದಲ್ಲೇ ದಿನ ಕಳೆಯುವಂತಾಗಿದೆ. ಕಳೆದ ತಿಂಗಳು ಹೊರ ರಾಜ್ಯಗಳಿಂದ ಉಡುಪಿಗೆ ಆಗಮಿಸಿರುವ 7,500ಕ್ಕೂ ಅಧಿಕ ಜನರು ಜಿಲ್ಲೆಯ ಪಾಲಿಗೆ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದಾರೆ.
ಇಂದು ಬಂದಿರುವ ಫಲಿತಾಂಶದಲ್ಲಿ ಮಹಾರಾಷ್ಟ್ರದಿಂದ ಬಂದಿರುವ 61 ಜನರಲ್ಲಿ ಕೊರೊನಾ ಪತ್ತೆಯಾಗಿದೆ. ಈ ಪೈಕಿ 6 ಮಕ್ಕಳಿದ್ದು ಸಂಪರ್ಕ ಪತ್ತೆಯಾಗದ 37 ಪಾಸಿಟಿವ್ ಕೇಸ್ಗಳಿವೆ ಎಂದು ಅರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಉಡುಪಿಯಲ್ಲಿ ಕೊರೊನಾಘಾತ:ತಲೆನೋವಾದ ಮೊಬೈಲ್ ಸ್ವಿಚ್ ಆಫ್ ಮಾಡಿರುವ ಐವರು ಸೋಂಕಿತರು ಈ 37 ಜನರನ್ನು ಪತ್ತೆ ಹಚ್ಚುವುದು ಜಿಲ್ಲಾಡಳಿತಕ್ಕೆ ಭಾರಿ ತಲೆನೋವಾಗಿದ್ದು, ಇದರಲ್ಲಿ ಈಗಾಗಲೇ 22 ಸೋಂಕಿತರ ವಿಳಾಸವನ್ನು ಪತ್ತೆಹಚ್ಚುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ. ಆದರೆ 5 ಜನರು ಮಾತ್ರ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿರುವುದರಿಂದ ಇವರನ್ನು ಪತ್ತೆ ಹಚ್ಚುವುದು ಜಿಲ್ಲಾಡಳಿತಕ್ಕೆ ಸವಾಲಾಗಿದೆ.
ಮುಂಬೈ ಜೊತೆ ದುಬೈನಿಂದ ಬಂದವರು ಕೂಡ ಜಿಲ್ಲೆಗೆ ವೈರಸ್ ಹೊತ್ತು ತಂದಿದ್ದು ಇಂದು ಬಂದ ವರದಿಯಲ್ಲಿ ಮೂವರು ದುಬೈ ಸಂಪರ್ಕ ಹೊಂದಿರುವುದು ಖಚಿತವಾಗಿದೆ. ದುಬೈನಿಂದ ಬಂದ ಕೊರೊನಾ ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಇತ್ತ ಮಹಾರಾಷ್ಟ್ರದಿಂದ ಉಡುಪಿಗೆ ಬಂದವರ ಪೈಕಿ ಈವರೆಗೆ 222 ಜನರಲ್ಲಿ ಕೊರೊನಾ ವೈರಸ್ ಕಂಡುಬಂದಿದೆ.
ಪಾಸಿಟಿವ್ ಕೇಸ್ಗಳು ಈ ರೀತಿ ಹೆಚ್ಚುತ್ತಿದ್ದರೂ ಎಲ್ಲವನ್ನೂ ಎದುರಿಸುತ್ತೇವೆ ಎಂದು ಸಜ್ಜಾಗಿ ಕುಳಿತಿದ್ದ ಉಡುಪಿ ಜಿಲ್ಲಾಡಳಿತಕ್ಕೆ ಇದೀಗ ಸೋಂಕು ಅಂಟಿರುವುದು ಭಾರಿ ಹಿನ್ನಡೆ ಉಂಟು ಮಾಡಿದೆ.
ಜಿಲ್ಲೆಯ 6 ಸಾವಿರಕ್ಕೂ ಅಧಿಕ ವರದಿಗಳು ಬರಲು ಬಾಕಿ ಇದ್ದು ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. ಹೀಗಾಗಿ ತಾಲೂಕು ಆಸ್ಪತ್ರೆಗಳನ್ನು ಬಳಸಿಕೊಳ್ಳುವ ಅನಿವಾರ್ಯತೆ ಎದುರಾಗಿದ್ದು ರೋಗ ಲಕ್ಷಣವಿರದ ಪಾಸಿಟಿವ್ ರೋಗಿಗಳನ್ನು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ.
ಹೆಚ್ಚು ಅಪಾಯದ ಸಾಧ್ಯತೆ ಇರುವ ವೃದ್ಧರು, ಮಕ್ಕಳು, ಗರ್ಭಿಣಿಯರು ಮತ್ತು ಶೀತ-ಜ್ವರ ಹೆಚ್ಚಾಗಿರುವ ರೋಗಿಗಳನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ರವಾನಿಸುವ ಕೆಲಸ ಈಗಾಗಲೇ ಆರಂಭಗೊಂಡಿದೆ.