ಉಡುಪಿ:ಯಕ್ಷಗಾನ ಕಲೆಯ ಸಂಪತ್ತನ್ನು ಪಸರಿಸಲು ಇದೇ ಮೊದಲ ಬಾರಿಗೆ ಉಡುಪಿಯಲ್ಲಿ ರಾಜ್ಯಮಟ್ಟದ "ಸಮಗ್ರ ಯಕ್ಷಗಾನ ಸಮ್ಮೇಳನ" ಹಮ್ಮಿಕೊಂಡಿದ್ದು, ವಿದ್ಯುಕ್ತವಾಗಿ ಉದ್ಘಾಟನೆಗೊಂಡಿದೆ. ಕೇಂದ್ರ ಕೃಷಿ, ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಅವರು ಸಮ್ಮೇಳನ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಉಡುಪಿ ಮತ್ತು ಇಡೀ ಕರಾವಳಿ ಭಾಗದಲ್ಲಿ ಯಕ್ಷಗಾನ ಜೀವಾಳವಾಗಿದೆ. ಈ ಭವ್ಯ ಕಲೆಗೆ ಸದಾ ಬೆಂಬಲವಿದೆ. ಯಕ್ಷಗಾನಕ್ಕೆ ಜನರನ್ನು ಸೆಳೆಯುವ ಶಕ್ತಿ ಇದ್ದು, ಪುರಾಣ, ಜನಪದ ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳಲು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕಲೆಯನ್ನು ಅರಿಯಬೇಕು ಎಂದು ಸಲಹೆ ನೀಡಿದರು.
ನಮ್ಮ ಸಂಸ್ಕೃತಿ, ಇತಿಹಾಸ ಮತ್ತು ಪೌರಾಣಿಕ ಕಥೆಗಳನ್ನು ತಿಳಿದುಕೊಳ್ಳಲು ರಾಜ್ಯದ ಶಾಲೆಗಳಲ್ಲಿ ಯಕ್ಷಗಾನವನ್ನು ವಿದ್ಯಾರ್ಥಿಗಳಿಗೆ ಕಲಿಸಬೇಕು. ಯಕ್ಷಗಾನ ಎಂಬುದು ಧಾರ್ಮಿಕ ಕಲೆಯಾಗಿಲ್ಲ. ಅದನ್ನು ಆ ದೃಷ್ಟಿಕೋನದಿಂದ ಮಾತ್ರ ನೋಡಬಾರದು. ಶ್ರೀಮಂತ ಕಲಾ ಪರಂಪರೆಯನ್ನು ನಾವು ಉಳಿಸಬೇಕಿದೆ ಎಂದರು.
ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ ವೇಷಧಾರಿಗಳ ಭವ್ಯ ಮೆರವಣಿಗೆಯನ್ನು ನಡೆಸಲಾಯಿತು. ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಸಾಮಾಜಿಕ ಕಾರ್ಯಕರ್ತ ನಾಡೋಜ ಜಿ ಶಂಕರ್ ಅವರು ಧ್ವಜಾರೋಹಣ ನೆರವೇರಿಸಿದರು.
ಉಡುಪಿ ಎಂಜಿಎಂ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮವು ರಾಜ್ಯಮಟ್ಟದ ಮೊದಲ ಯಕ್ಷಗಾನ ಸಮ್ಮೇಳನವಾಗಿದೆ. ಡಾ.ಎಂ. ಪ್ರಭಾಕರ್ ಜೋಶಿ ಅವರು ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ. ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ಕುಮಾರ್ ಅವರು ಸಮ್ಮೇಳನದ ನೇತೃತ್ವ ವಹಿಸಿದ್ದಾರೆ. 5 ಜಿಲ್ಲೆಯ ಹಿರಿಯ ಯಕ್ಷಗಾನ ಕಲಾವಿದರು, ವಿಧ್ವಾಂಸರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.