ಉಡುಪಿ: ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಕಾಳಾವರದಲ್ಲಿ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ ಯಡಾಡಿ ಮತ್ಯಾಡಿ ಕೂಡಲ್ ನಿವಾಸಿ ಅಜೇಂದ್ರ ಶೆಟ್ಟಿ ಎಂಬವರನ್ನು ಇತ್ತೀಚೆಗೆ ಹತ್ಯೆ ಮಾಡಲಾಗಿದೆ. ಅಜೇಂದ್ರ ಶೆಟ್ಟಿಯ ಫೈನಾನ್ಸ್ ಪಾಲುದಾರನಾಗಿದ್ದ ಅನುಪ್ ಶೆಟ್ಟಿ ಎಂಬಾತನೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಈಗಾಗಲೇ ಅನುಪ್ ಶೆಟ್ಟಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಅಸೋಡು ಕಾಳಾವರ ಸಮೀಪದ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲೇ ಇರುವ ಕಾಂಪ್ಲೆಕ್ಸ್ನಲ್ಲಿ ಡ್ರೀಮ್ ಫೈನಾನ್ಸ್ ಎನ್ನುವ ಆರ್ಥಿಕ ವ್ಯವಹಾರದ ಸಂಸ್ಥೆಯನ್ನು ಅಜೇಂದ್ರ ಶೆಟ್ಟಿ ಹಾಗೂ ಮೊಳಹಳ್ಳಿ ಮೂಲದ ಅನುಪ್ ಶೆಟ್ಟಿ ಪಾಲುದಾರಿಕೆಯೊಂದಿಗೆ 2017ರಿಂದ ನಡೆಸುತ್ತಿದ್ದರು. ಈ ವ್ಯವಹಾರಕ್ಕೆ ಸಂಬಂಧಪಟ್ಟ ವೈಷಮ್ಯದಿಂದ ಅಜೇಂದ್ರ ಶೆಟ್ಟಿಯನ್ನು ಪಾಲುದಾರ ಅನುಪ್ ಶೆಟ್ಟಿ ಹತ್ಯೆ ಮಾಡಿರುವ ಅನುಮಾನ ವ್ಯಕ್ತವಾಗಿದೆ.
ಪ್ರಕರಣದ ವಿವರ:ಸಾಮಾನ್ಯವಾಗಿ ರಾತ್ರಿ 9 ಗಂಟೆಗೆ ಕಚೇರಿಯಿಂದ ಮನೆ ಸೇರುತ್ತಿದ್ದ ಅಜೇಂದ್ರ ಶೆಟ್ಟಿ, ಜುಲೈ 31 ರ ಶನಿವಾರ ಮಾತ್ರ ತಡರಾತ್ರಿಯಾದರೂ ಬಂದಿರಲಿಲ್ಲ. ಇದರಿಂದ ಹೆದರಿದ ಮನೆಯವರು ಮತ್ತು ಸ್ನೇಹಿತರು ಹುಡುಕಾಟ ನಡೆಸಿದ್ದರು. ಅಜೇಂದ್ರ ಅವರ ಸಹೋದರ ಮಹೇಂದ್ರ ಶೆಟ್ಟಿ, ಸ್ನೇಹಿತರಾದ ರಕ್ಷಿತ್, ಜಯಕರ ಹಾಗೂ ಪ್ರಥ್ವೀಸ್ ಹುಡುಕಾಡುತ್ತಾ ಕಾಳಾವರದ ಫೈನಾನ್ಸ್ ಕಚೇರಿಗೆ ಬಂದಾಗ ಎದುರಿನ ಶಟರ್ ಮುಚ್ಚಿತ್ತು, ಬೀಗ ಹಾಕಿರಲಿಲ್ಲ. ಅನುಮಾನಗೊಂಡು ಶಟರ್ ತೆರೆದು ಒಳ ಪ್ರವೇಶಿಸಿದಾಗ ಅಜೇಂದ್ರ ಶೆಟ್ಟಿ ಕುಳಿತ ಭಂಗಿಯಲ್ಲಿ ಕೊಲೆಯಾಗಿರುವುದು ಗೊತ್ತಾಗಿದೆ.
ತಕ್ಷಣ ಅವರನ್ನು ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಅಜೇಂದ್ರ ಅವರ ಕೆನ್ನೆ, ಕತ್ತು, ಕಾಲಿನ ಭಾಗದಲ್ಲಿ ಇರಿದ ಗಾಯಗಳಾಗಿತ್ತು. ಹರಿತವಾದ ಆಯುಧದಿಂದ ಕತ್ತು ಸೀಳಿ ಬರ್ಬರವಾಗಿ ಕೊಲೆಗೈಯ್ಯಲಾಗಿತ್ತು.