ಉಡುಪಿ: ಜಿಲ್ಲಾ ಪಂಚಾಯತ್ ಚುನಾವಣೆಗೆ ಇನ್ನೂ ಸಮಯ ಇದೆ. ಆದರೆ, ಹಳ್ಳಿ ರಾಜಕೀಯ ಈಗಾಗಲೇ ಗರಿಗೆದರಿದೆ. ಉಡುಪಿ ಜಿಲ್ಲೆಯ ಪೆರ್ಡೂರು ಗ್ರಾಮದಲ್ಲಿ ಪಿಡಿಒ ಒಬ್ಬರು ಕಟ್ಟಿಸಲು ಹೊರಟಿರುವ ಬಂಗಲೆ ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ. ಅತ್ತ ಕಾಂಗ್ರೆಸ್ ಈ ವಿಚಾರವಾಗಿ ರಂಪಾಟ ಮಾಡುತ್ತಿದ್ದರೆ, ಇತ್ತ ಬಿಜೆಪಿ ಪಿಡಿಒ ಬೆಂಬಲಕ್ಕೆ ನಿಂತಿದೆ. ಮಾಜಿ ಸಚಿವರು ಹಳ್ಳಿಗೆ ಬಂದು ಪಿಡಿಒ ವಿರುದ್ಧ ಸಮರ ಸಾರಿದ್ದಾರೆ.
ಉಡುಪಿ ಜಿಲ್ಲೆಯ ಪೆರ್ಡೂರು ನಲ್ಲಿ ಕಳೆದ ಒಂದು ತಿಂಗಳಿಂದ ಈ ಬಂಗಲೆ ವಿಚಾರವು ವಿವಾದದ ಕೇಂದ್ರ ಬಿಂದುವಾಗಿದೆ. ಇದು ಯಾವುದೇ ಉದ್ಯಮಿ ಕಟ್ಟಿಸುತ್ತಿರುವ ಬಂಗಲೆ ಅಲ್ಲ. ಪಕ್ಕದ ಹೆಬ್ರಿ ಪಂಚಾಯತ್ನಲ್ಲಿ ಪಿಡಿಒ ಆಗಿ ಅಧಿಕಾರ ನಿರ್ವಹಿಸುತ್ತಿರುವ ಸದಾಶಿವ ಸೇರ್ವೆಗಾರ್ ಎಂಬುವವರ ಮನೆ ಇದು.
ಸರ್ಕಾರಿ ಭೂಮಿಯಲ್ಲಿ ಬಂಗಲೆ ನಿರ್ಮಾಣ ಆರೋಪ: ಪಿಡಿಒ ವಿರುದ್ಧ ಮಾಜಿ ಸಚಿವರ ಸಮರ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿರುವ ಸದಾಶಿವ ಸೇರ್ವೆಗಾರ್ 15 ಸೆಂಟ್ಸ್ ಜಾಗದಲ್ಲಿ ವಾಸ್ತವ್ಯದ ಮನೆ ನಿರ್ಮಾಣ ಮಾಡಲು ಕಟ್ಟಡ ಪರವಾನಗಿ ಪಡೆದುಕೊಂಡಿದ್ದಾರೆ. ಆದರೆ, ಪರವಾನಗಿ ಪಡೆದುಕೊಂಡ ಜಾಗದಲ್ಲಿ ಮನೆ ನಿರ್ಮಾಣ ಮಾಡದೇ, ಸರ್ಕಾರಿ ಭೂಮಿಯಲ್ಲಿ ಬೃಹತ್ ಬಂಗಲೆ ಕಟ್ಟಿಸುತ್ತಿದ್ದಾರೆ. ಇದೊಂದು ಅರಣ್ಯ ಪ್ರದೇಶವಾಗಿದ್ದು, ಡೀಮ್ಡ್ ಫಾರೆಸ್ಟ್ ಗೆ ಒಳಪಟ್ಟ ಭೂಮಿಯಲ್ಲಿ ಬೃಹತ್ ಬಂಗಲೆ ತಲೆ ಎತ್ತುತ್ತಿದೆ ಎಂದು ಆರೋಪಿಸಿ ಈ ಕಾನೂನುಬಾಹಿರ ಕಟ್ಟಡ ನಿರ್ಮಾಣ ಪೆರ್ಡೂರು ಪಂಚಾಯಿತಿಯ ಪಿಡಿಒ ಸುಮನಾ ಆಕ್ಷೇಪಿಸಿ ನೋಟಿಸ್ ನೀಡಿದ್ದರು.
ಆದರೆ, ಆಡಳಿತ ನಡೆಸುವ ಬಿಜೆಪಿ ಪಕ್ಷದ ಜನಪ್ರತಿನಿಧಿಗಳ ಮೂಲಕ ಒತ್ತಡ ತಂದು ಸುಮನಾರನ್ನು ಸದ್ಯ ಜಿಲ್ಲಾ ಪಂಚಾಯತ್ ಕಚೇರಿಗೆ ವರ್ಗಾವಣೆ ಮಾಡಲಾಗಿದೆ. ಸುಮನಾ ಅವರು ದಲಿತ ಮಹಿಳೆಯಾಗಿದ್ದು, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ, ಈಕೆಗೆ ನ್ಯಾಯ ಒದಗಿಸಿಕೊಡಬೇಕು ಎಂದು ಕಾಂಗ್ರೆಸ್ ನಾಯಕರು ಬೀದಿಗಿಳಿದಿದ್ದಾರೆ.
ಪಿಡಿಒ ಸೇರ್ವೆಗಾರ್ ವಿರುದ್ಧ ಹೋರಾಟ :
ಕಳೆದ ಒಂದು ತಿಂಗಳಿಂದ ವಿವಿಧ ಸಂಘಟನೆಗಳು ಪಿಡಿಒ ಸೇರ್ವೆಗಾರ್ ವಿರುದ್ಧ ಹೋರಾಟ ನಡೆಸುತ್ತಿವೆ. ಈ ಕಟ್ಟಡದ ಪರವಾನಗಿ ರದ್ದು ಮಾಡಲು ಪಂಚಾಯತ್ ಬಹುಮತದ ನಿರ್ಣಯ ಕೈಗೊಂಡಿದೆ. ಕಂದಾಯ ಇಲಾಖೆ ಪರಿಶೀಲನೆ ನಡೆಸಿದ್ದು, ಅಕ್ರಮ ನಡೆದಿರುವುದನ್ನು ಒಪ್ಪಿಕೊಂಡಿದೆ. ಹಾಗಾಗಿ ಕೂಡಲೇ ಈ ಕಟ್ಟಡವನ್ನು ಕೆಡವಲೇಬೇಕು ಎಂದು ಹೋರಾಟ ನಡೆಸುತ್ತಿದ್ದಾರೆ.
ಈ ವಿವಾದದ ಕೇಂದ್ರ ಬಿಂದು ಪಿಡಿಒ ಸದಾಶಿವ ಸೇರ್ವೆಗಾರ್ ಆದರೂ ಕೂಡ ಟಾರ್ಗೆಟ್ ಆಗಿರೋದು ಇದೇ ಪಂಚಾಯಿತಿಯ ಮಾಜಿ ಉಪಾಧ್ಯಕ್ಷ ಸುರೇಶ್ ಸೇರ್ವೆಗಾರ್. ಅಂದರೆ ಪಿಡಿಒ ಸದಾಶಿವ ಅವರ ಅಣ್ಣ. ಬಿಜೆಪಿ ಪಕ್ಷದ ಜೊತೆ ಗುರುತಿಸಿಕೊಂಡಿರುವ ಇವರು, ಪಕ್ಷದ ಕಾರ್ಯಕಾರಿಣಿಯಲ್ಲೂ ಸದಸ್ಯರಾಗಿದ್ದಾರೆ. ಕಾಂಗ್ರೆಸ್ ಶಕ್ತಿ ಕೇಂದ್ರವಾಗಿದ್ದ ಪೆರ್ಡೂರು ನಲ್ಲಿ ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಸದ್ಯ ಪೆರ್ಡೂರು ಪಂಚಾಯಿತಿಯಲ್ಲಿ ಕಾಂಗ್ರೆಸ್ ಬಹುಮತ ಪಡೆದಿದ್ದರೂ ಬಿಜೆಪಿ ಅಧಿಕಾರ ನಡೆಸುತ್ತಿದೆ. ಈ ರಾಜಕೀಯ ವೈಷಮ್ಯದ ಕಾರಣದಿಂದಲೇ ನಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಸುರೇಶ್ ಆರೋಪಿಸಿದ್ದಾರೆ.
ಇದನ್ನೂ ಓದಿ:ಉತ್ತರಕನ್ನಡದಲ್ಲಿ ಕೋವಿಡ್ ಮೂರನೇ ಅಲೆ ಆತಂಕ: ಕಳೆದ 7 ತಿಂಗಳಲ್ಲಿ 46,856 ಮಕ್ಕಳಿಗೆ ವೈರಲ್ ಫೀವರ್
ಮನೆ ಕ್ರಮಬದ್ಧವಾಗಿದೆ. ಪಕ್ಕದಲ್ಲೇ ಕೃಷಿ ಭೂಮಿಯಿದೆ. ಅದರ ಕೆಲವೇ ಅಡಿಗಳ ದೂರದಲ್ಲಿ ನಮ್ಮ ಸ್ವಾಮ್ಯಕ್ಕೆ ಒಳಪಟ್ಟ ಕುಮ್ಕಿ ಸ್ಥಳದಲ್ಲಿ ಮನೆ ಕಟ್ಟಿಸುತ್ತಿದ್ದೇವೆ. ಇದು ಪಿಡಿಒ ಸದಾಶಿವ ಅವರು ಕಟ್ಟಿಸುತ್ತಿರುವ ಮನೆಯಲ್ಲ. ಕೂಡು ಕುಟುಂಬದಲ್ಲಿರುವ ನಾವು, ನಾಲ್ಕು ಮಂದಿ ಸಹೋದರರು ಸೇರಿ ಪರವಾನಗಿ ಪಡೆದು ಮನೆ ನಿರ್ಮಾಣ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಮೇಲ್ನೋಟಕ್ಕೆ ಇದೊಂದು ಭೂ ವಿವಾದದಂತೆ ಕಂಡರೂ, ಬರಲಿರುವ ಜಿಲ್ಲಾ ಪಂಚಾಯತ್ ಚುನಾವಣೆಯ ರಾಜಕೀಯ ದೊಂಬರಾಟಕ್ಕೆ ವೇದಿಕೆ ಕಲ್ಪಿಸಿದಂತಾಗಿದೆ.