ಉಡುಪಿ: ಕೊರೊನಾ ಬಾರದಂತೆ ತಡೆಯಲು ಮಾಸ್ಕ್ ಬಳಕೆ ಮಾಡಬೇಕು. ಇದು ಈಗ ಕಡ್ಡಾಯ ಕೂಡ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಇದ್ದವರು ಕೂಡ, ಪೊಲೀಸರ ದಂಡಕ್ಕೆ ಹೆದರಿ ಆದ್ರೂ ಮಾಸ್ಕ್ ಬಳಕೆ ಮಾಡೇ ಮಾಡ್ತೀವಿ.
ಹೀಗೆ ಬಳಸಿದ ಮಾಸ್ಕ್‌ಗಳನ್ನು ಕೆಲವರು ಡಸ್ಟ್ ಬಿನ್ಗೆ ಹಾಕಿದ್ರೆ, ಇನ್ನೂ ಕೆಲವರು ಎಲ್ಲೆಂದರಲ್ಲಿ ಎಸೆದು ಪರಿಸರದ ಅಂದ ಕೆಡಿಸುತ್ತಾರೆ. ಇದಕ್ಕಾಗಿ ಉಡುಪಿಯ ಕಾರ್ಕಳದ ಪರಿಸರ ಪ್ರೇಮಿ ರಮಿತಾ ಶೈಲೇಂದ್ರ ಅವರು, ಬಳಸಿ ಮಾಸ್ಕ್ನಿಂದ ಇಟ್ಟಿಗೆಯನ್ನು ತಯಾರಿಸಬಹುದು ಅಂತ ತೋರಿಸಿಕೊಟ್ಟಿದ್ದಾರೆ.
ಮಾಸ್ಕ್ನಿಂದ ಇಟ್ಟಿಗೆ ತಯಾರಿಸುವ ಕಾರ್ಕಳದ ಪರಿಸರ ಪ್ರೇಮಿ ಬಳಸಿದ ಮಾಸ್ಕ್‌ಗಳನ್ನು 72 ಗಂಟೆಗಳ ಕಾಲ ಹಾಗೆ ಇಟ್ರೆ, ಅದರಲ್ಲಿ ಇದ್ದ ರೋಗಾಣುಗಳು ಸಾಯುತ್ತೆ. ನಂತರ ಅದನ್ನು ತುಂಡು ತುಂಡಾಗಿ ಕತ್ತರಿಸಿ, ನೀರಿನಲ್ಲಿ ಸುಮಾರು 4 ಗಂಟೆಗಳ ಕಾಲ ನೆನೆಸಿಟ್ರೆ ಅದು ಹುಡಿ ಹುಡಿಯಾಗುತ್ತೆ. ಪುಡಿಯಾದ ಮಾಸ್ಕ್‌ಗೆ ಸ್ವಲ್ಪ ಸಿಮೆಂಟ್ ಮಿಶ್ರಣ ಮಾಡಿ, ನಂತರ ಇಟ್ಟಿಗೆ ಅಚ್ಚು ಅಥವಾ ಮನೆಯಲ್ಲಿ ಇರೋ ಚೌಕಾಕಾರದ ವಸ್ತುವಿಗೆ ಇದನ್ನು ತುಂಬಿಸಿ ಇಟ್ರೆ ಇಟ್ಟಿಗೆ ರೆಡಿ.
ಹೀಗೆ ರೆಡಿಯಾದ ಇಟ್ಟಿಗೆಯನ್ನು ಬಿಸಿಲಿನಲ್ಲಿ ಕೆಲವು ಗಂಟೆಗಳ ಕಾಲ ಒಣಗಿಸಬೇಕು. ಹೀಗೆ ಒಣಗಿಸಿ ಇಟ್ಟಿಗೆಯನ್ನು ಗೋಡೆಕಟ್ಟಲು ಬಳಸಬಹುದಾಗಿದೆ. ರಮಿತಾ ಶೈಲೇಂದ್ರ ಅವರು ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಲಾಕ್ಡೌನ್ ಸಮಯದಲ್ಲಿ ಅನೇಕ ಬಡವರಿಗೂ ಕಿಟ್ ವಿತರಣೆ ಮಾಡಿದ್ದಾರೆ.