ಕರ್ನಾಟಕ

karnataka

ETV Bharat / state

ಡ್ರಗ್ಸ್ ಪ್ರಕರಣ: ಮಣಿಪಾಲ ವಿವಿಯ 42 ವಿದ್ಯಾರ್ಥಿಗಳು ಅಮಾನತು - ಜಿಲ್ಲಾ ಪೊಲೀಸ್​​ ವರಿಷ್ಠಾಧಿಕಾರಿ ಅಕ್ಷಯ ಮಚ್ಚೀಂದ್ರ

ಉಡುಪಿಯಲ್ಲಿ ಹೆಚ್ಚಿದ ಡ್ರಗ್ಸ್​ ಪ್ರಕರಣ - ಮಣಿಪಾಲ ವಿವಿಯ (ಮಾಹೆ) 42 ವಿದ್ಯಾರ್ಥಿಗಳು ಅಮಾನತು - ಮಣಿಪಾಲ್​ ಅಕಾಡೆಮಿ ಆಫ್​​ ಹೈಯರ್​ ಎಜುಕೇಶನ್​ ಆದೇಶ - ವಿವಿ ಮತ್ತು ಪೊಲೀಸ್​ ಇಲಾಖೆಯ ಜಂಟಿ ಕಾರ್ಯಾಚರಣೆ

Etv Bharat
Etv Bharat

By

Published : Feb 25, 2023, 4:40 PM IST

ಡ್ರಗ್ಸ್ ಪ್ರಕರಣ: ಮಣಿಪಾಲ ವಿವಿಯ 42 ವಿದ್ಯಾರ್ಥಿಗಳು ಅಮಾನತು

ಉಡುಪಿ : ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ದಿನದಿಂದ ದಿನಕ್ಕೆ ಮಾದಕ ವ್ಯಸನ ಪ್ರಕರಣಗಳು ಹೆಚ್ಚಳವಾಗುತ್ತದೆ. ಮಾದಕ ದ್ರವ್ಯ ಪ್ರಕರಣ ಹಿನ್ನೆಲೆ ಮಣಿಪಾಲ್​ ಅಕಾಡೆಮಿ ಆಫ್​​ ಹೈಯರ್​ ಎಜುಕೇಶನ್​ (ಮಾಹೆ) ವಿವಿಯ 42 ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್​​ ವರಿಷ್ಠಾಧಿಕಾರಿ ಅಕ್ಷಯ ಮಚ್ಚೀಂದ್ರ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಒಂದು ತಿಂಗಳ ಹಿಂದೆ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿ ಮಣಿಪಾಲ (ಮಾಹೆ) ವಿವಿ ಆದೇಶ ಹೊರಡಿಸಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ದಿಟ್ಟ ನಿರ್ಧಾರ ಕೈಗೊಳ್ಳಲಾಗಿದೆ. ಆರೋಗ್ಯಕರ ವಾತಾವರಣ ಸೃಷ್ಟಿಸಲು ನಾವು ಬದ್ಧ ಎಂದು ಮಾಹೆ ವಿವಿ ಪ್ರಕಟಣೆ ತಿಳಿಸಿತ್ತು.ಪೊಲೀಸ್ ಮತ್ತು ಮಾಹೆ ವಿವಿಯ ಆಂತರಿಕ ತನಿಖೆಯಿಂದ ಮಾದಕ ವ್ಯಸನ ಪ್ರಕರಣ ಬಯಲಾಗಿತ್ತು.ಇನ್ನು ಮಂಗಳೂರಿನಲ್ಲಿ ವೈದ್ಯರ ಡ್ರಗ್ಸ್ ಪ್ರಕರಣ ಭಾರೀ ಸುದ್ದಿಯಾದ ಬೆನ್ನಲ್ಲೇ ಕರಾವಳಿಯಲ್ಲಿ ಮಾದಕ ವ್ಯಸನ ವಿರುದ್ಧ ಎಡಿಜಿಪಿ ಅಲೋಕ್ ಕುಮಾರ್ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದರು.

ಪ್ರಕರಣ ಸಂಬಂಧ ಮಾಹಿತಿ ನೀಡಿರುವ ಎಸ್ಪಿ ಅಕ್ಷಯ ಮಚ್ಚೀಂದ್ರ, ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ನಾವು ಹಲವಾರು ಡ್ರಗ್ಸ್ ಪ್ರಕರಣಗಳನ್ನು ಪತ್ತೆ ಮಾಡಿದ್ದೇವೆ. ಕಾರ್ಯಾಚರಣೆಯಲ್ಲಿ ಅನೇಕ ಮಂದಿ ಡ್ರಗ್​ ಪೆಡ್ಲರ್​​ಗಳನ್ನ ವಶಕ್ಕೆ ಪಡೆದುಕೊಂಡಿದ್ದೇವೆ. ಪೆಡ್ಲರ್​ಗಳ ಮೂಲಕ ಗ್ರಾಹಕರು ಯಾರು ಎನ್ನುವುದನ್ನು ಪತ್ತೆ ಮಾಡಲಾಗಿದೆ. ಅಷ್ಟೇ ಅಲ್ಲದೆ ಕೆಲ ಗ್ರಾಹಕರಿಂದ ಪೆಡ್ಲರ್​ಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಹೇಳಿದರು.

ಮಣಿಪಾಲ್​ ವಿವಿಯ ಕೆಲ ವಿದ್ಯಾರ್ಥಿಗಳು ಮಾದಕ ದ್ರವ್ಯ ಪ್ರಕರಣದಲ್ಲಿ ತೊಡಗಿದ್ದರು. ಇವರಿಂದ ಅಪಾರ ಪ್ರಮಾಣದ ಮಾದಕ ವಸ್ತುಗಳನ್ನು ಪತ್ತೆ ಮಾಡಲಾಗಿತ್ತು. ಈ ಪ್ರಕರಣ ಬಗ್ಗೆ ನಾವು ವಿವಿಗೆ ಮಾಹಿತಿ ನೀಡಿದ್ದೆವು. ಕಾಲೇಜು ಮತ್ತು ಹಾಸ್ಟೆಲ್ ಆವರಣದಲ್ಲಿ ಮಾದಕ ವಸ್ತು ಪ್ರಕರಣದಲ್ಲಿ ತೊಡಗಿದ್ದ ವಿದ್ಯಾರ್ಥಿಗಳನ್ನು ಗುರುತಿಸಿ ವಿವಿಗೆ ಪಟ್ಟಿ ನೀಡಿದ್ದೇವೆ. ಈ ಸಂಬಂದ ಮಣಿಪಾಲ ವಿವಿಯ 42 ಮಂದಿ ವಿದ್ಯಾರ್ಥಿಗಳನ್ನು ಅಮಾನತು ಮಾಡಿದೆ. ಇನ್ನು ಇಂತಹ ವಿಚಾರದಲ್ಲಿ ಪೊಲೀಸ್ ಇಲಾಖೆಯಾಗಲಿ, ವಿವಿಯಾಗಲಿ ನಿರ್ಲಕ್ಷ ವಹಿಸುವುದಿಲ್ಲ ಎಂದು ಹೇಳಿದರು.

ಮಾದಕ ದ್ರವ್ಯ ಸೇವನೆ ಮಾಡಿದವರನ್ನು ಮಾಹೆ ವಿವಿ ತಾತ್ಕಾಲಿಕ ಅಮಾನತು ಮಾಡಿದೆ. ಒಂದು ತಿಂಗಳ ಕಾಲ ತರಗತಿ ಹಾಜರಾಗಲು ಅವಕಾಶವಿಲ್ಲ. ವಿಶ್ವವಿದ್ಯಾಲಯದ ಯಾವುದೇ ಸೌಲಭ್ಯಗಳನ್ನು ಅವರು ಬಳಸುವಂತಿಲ್ಲ. ಪೆಡ್ಲರ್​​ಗಳ ಮೇಲೆ ಮತ್ತಷ್ಟು ಗಂಭೀರ ಕ್ರಮ ಕೈಗೊಳ್ಳಲಾಗುತ್ತದೆ. ಪ್ರಕರಣ ಸಂಬಂಧ ಮಾಹೆ ವಿದ್ಯಾರ್ಥಿಗಳು, ಫೆಲೋಶಿಪ್ ಮಾಡುತ್ತಿರುವ ವಿದ್ಯಾರ್ಥಿಗಳು, ಮಾಹೆ ಸಹಭಾಗಿತ್ವದಲ್ಲಿ ಪ್ರಾಜೆಕ್ಟ್ ಮಾಡುತ್ತಿರುವವರು, ಶೈಕ್ಷಣಿಕವಾಗಿ ಮಾಹೆ ಜೊತೆ ಸಂಪರ್ಕ ಹೊಂದಿರುವ ವಿದ್ಯಾರ್ಥಿಗಳ ಪಟ್ಟಿ ಮಾಡಿಕೊಟ್ಟಿದ್ದೇವೆ. ಮಾದಕ ವ್ಯಸನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಮಾದಕ ವಸ್ತು ಸೇವನೆ ಮಾಡಿದವರನ್ನು ಕ್ರಿಮಿನಲ್​ಗಳು ಎಂದು ಪರಿಗಣಿಸಲಾಗುವುದಿಲ್ಲ. ಪೆಡ್ಲರ್‌ಗಳನ್ನು ಮಾತ್ರ ಕ್ರಿಮಿನಲ್ ಎಂದು ಪರಿಗಣಿಸುತ್ತೇವೆ. ಮೊಟ್ಟ ಮೊದಲ ಬಾರಿಗೆ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ ವಿವಿ ಈ ಕ್ರಮಕ್ಕೆ ಮುಂದಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ :ಗಾಂಜಾ: ಮಂಗಳೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಸೇರಿ ಮೂವರ ಬಂಧನ

ABOUT THE AUTHOR

...view details