ಉಡುಪಿ: ಉಡುಪಿಯ ಮಲ್ಪೆಯಲ್ಲಿರುವ ಸೈಂಟ್ ಮೆರೀಸ್ ದ್ವೀಪದಲ್ಲಿ ತಡರಾತ್ರಿ ಗುಂಡು ಪಾರ್ಟಿ ನಡೆಸಿದ ಆರೋಪ ಕೇಳಿ ಬಂದಿದೆ.
ದ್ವೀಪದಲ್ಲಿ ರಾತ್ರಿ 9:30ಕ್ಕೆ ಸ್ಥಳೀಯರು ದೀಪದ ಬೆಳಕು ಕಂಡಿದ್ದಾರೆ. ನಂತರ ಮಲ್ಪೆ ಹಾಗೂ ಕರಾವಳಿ ಕಾವಲು ಪಡೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಅಲರ್ಟ್ ಆಗುತ್ತಿದ್ದಂತೆ ದ್ವೀಪದಲ್ಲಿ ಲೈಟ್ ಆಫ್ ಆಗಿದೆ. ಪ್ರವಾಸಿ ಬೋಟ್ ಜಟ್ಟಿಯ ಸಮೀಪ ಎರಡು ಕಾರಿನಲ್ಲಿ 8 ಮಂದಿ ಪಾರ್ಟಿ ಮಾಡಲು ಬಂದಿದ್ದರು ಎನ್ನಲಾಗಿದೆ. ಬೀಚ್ ಹಾಗೂ ಸೈಂಟ್ ಮೆರೀಸ್ ದ್ವೀಪದ ನಿರ್ವಾಹಕ ಸುದೇಶ್ ಶೆಟ್ಟಿ ಹಾಗೂ ನಿರ್ಮಿತಿ ಕೇಂದ್ರ ಸಿಬ್ಬಂದಿಯ ಕಾರು ಸ್ಥಳದಲ್ಲಿ ಸಿಕ್ಕಿದೆ.
ದ್ವೀಪದಲ್ಲಿ ಇದ್ದಿದ್ದನ್ನು ಸುದೇಶ್ ಶೆಟ್ಟಿ ಒಪ್ಪಿಕೊಂಡಿದ್ದಾರೆ. ದ್ವೀಪದಲ್ಲಿ ಪರಿಕರಗಳ ಸಾಗಾಟಕ್ಕೆ ಬಂದಿದ್ದು, ಹೆಚ್ಚಿನ ಉಬ್ಬರವಿಳಿತವಿದ್ದ ಕಾರಣ ತೀರ ಪ್ರದೇಶಕ್ಕೆ ಬರಲಾಗಲಿಲ್ಲ ಎಂದು ಸುದೇಶ್ ಶೆಟ್ಟಿ ತಿಳಿಸಿದ್ದಾರೆ ಎನ್ನಲಾಗಿದೆ.
ಸ್ಥಳದಲ್ಲಿ ಪತ್ತೆಯಾದ ಕಾರುಗಳು ರಾತ್ರಿ ಒಂದು ಗಂಟೆಗೆ ಸುದೇಶ್ ಮತ್ತು ಸ್ನೇಹಿತರು ದ್ವೀಪದಿಂದ ವಾಪಸ್ಸಾಗಿದ್ದಾರೆ. ಕರಾವಳಿ ಕಾವಲು ಪಡೆಯ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ದ್ವೀಪದಲ್ಲಿ ಪಾರ್ಟಿ ನಡೆಸಿದ ಬಗ್ಗೆ ಸ್ಥಳೀಯ ಚುನಾಯಿತ ನಗರಸಭಾ ಸದಸ್ಯ ಯೋಗೀಶ್ ಕರಾವಳಿ ಕಾವಲು ಪಡೆಗೆ ದೂರು ನೀಡಿದ್ದಾರೆ.
ದ್ವೀಪಕ್ಕೆ ರಾತ್ರಿ ಯಾರೂ ತೆರಳುವಂತಿಲ್ಲ. ವಿಚಾರಣೆ ನಡೆಸಿ ಜಿಲ್ಲಾಧಿಕಾರಿಗೆ ವರದಿ ನೀಡೋದಾಗಿ ಕರಾವಳಿ ಕಾವಲು ಪಡೆ ಪೊಲೀಸರು ತಿಳಿದ್ದಾರೆ. ಲಾಕ್ ಡೌನ್ ನಿಷೇಧಿತ ಅವಧಿಯಲ್ಲಿ ದ್ವೀಪಕ್ಕೆ ತೆರಳಿದ ಬಗ್ಗೆ ಸ್ಥಳೀಯರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.