ಉಡುಪಿ :ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಹಿಜಾಬ್ ಕುರಿತ ವಿವಾದ ಇಂದೂ ಮುಂದುವರಿದಿದೆ. ವಿದ್ಯಾರ್ಥಿಗಳನ್ನು ಬೆಂಬಲಿಸಲು ಕೇಸರಿ ಶಾಲು ತೊಟ್ಟ ವಿದ್ಯಾರ್ಥಿನಿಯರು ಕಾಲೇಜಿನಲ್ಲಿ ಪ್ರತಿಭಟಿಸಿದರು. ಕಾಂಪೌಂಡ್ ಮುಂಭಾಗ ಕೇಸರಿ ಶಾಲು ತೊಟ್ಟು ಹಿಜಾಬ್‌ಗೆ ವಿರೋಧ ವ್ಯಕ್ತಪಡಿಸಿದರು.
ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್‌ಗೆ ಅವಕಾಶ ನೀಡಿದರೆ ನಮಗೂ ಕೇಸರಿ ಶಾಲು ಧರಿಸಲು ಅವಕಾಶ ನೀಡಿ ಅಂತಾ ಕೆಲ ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚುವರಿ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ: ಮಂಡ್ಯ: ನೂರಾರು ಕೇಸರಿ ಶಾಲು ತೊಟ್ಟ ವಿದ್ಯಾರ್ಥಿಗಳ ವಿರುದ್ಧ ಮುಸ್ಲಿಂ ವಿದ್ಯಾರ್ಥಿನಿ ಏಕಾಂಗಿ ಹೋರಾಟ!
ಕಾಲೇಜಿಗೆ ರಜೆ ಘೋಷಣೆ :ಇಂದು ಕಾಲೇಜು ಆವರಣ ಒಳಗಡೆ ಪ್ರತಿಭಟನೆ ನಡೆಸಿದ ಮುಸ್ಲಿಂ ವಿದ್ಯಾರ್ಥಿನಿಯರು, ಹಿಜಾಬ್ ನಮ್ಮ ಹಕ್ಕು ಅಂತಾ ಘೋಷಣೆ ಕೂಗಿದರು. ಇದರಿಂದ ಕಾಲೇಜು ಆವರಣ ಒಳಗಡೆ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದ ಹಿಜಾಬ್ ವರ್ಸಸ್ ಕೇಸರಿ ಫೈಟ್ ತಾರಕ್ಕೇರುತ್ತಿರುವುದನ್ನು ಅರಿತ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ ನಾಯಕ್ ಮುಂದಿನ ನಿರ್ಧಾರದವರೆಗೆ ಕಾಲೇಜಿಗೆ ರಜೆ ಕೊಡಲಾಗಿದೆ ಎಂದು ಘೋಷಣೆ ಮಾಡಿದರು.
ಹೆಚ್ಚುವರಿ ಪೊಲೀಸರ ನಿಯೋಜನೆ :ನೂರಾರು ಸಂಖ್ಯೆಯಲ್ಲಿ ಜಮಾಯಿಸಿರುವ ಕೇಸರಿ ಶಾಲು ಮತ್ತು ಪೇಟ ತೊಟ್ಟ ವಿದ್ಯಾರ್ಥಿಗಳು ಹಾಗೂ ಇದಕ್ಕೆ ಪ್ರತಿಯಾಗಿ ಬುರ್ಕಾ ತೊಟ್ಟು ಬಂದ ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಹೊರಗೆ ಕಳುಹಿಸಲಾಗಿದೆ.
ಆದರೆ, ಬಿಗುವಿನ ವಾತಾವರಣ ನಿರ್ಮಾಣವಾಗಿದ್ದರಿಂದ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರುಡೇಕರ್ ಮತ್ತು ಇನ್ಸ್ಪೆಕ್ಟರ್ ಪ್ರಮೋದ್ ಸ್ಥಳಕ್ಕೆ ಆಗಮಿಸಿ ಕಾಲೇಜಿನ ಮುಂದೆ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಿದ್ದಾರೆ.
ಓದಿನ ಬಗ್ಗೆ ಗಮನ ಕೊಡಿ :ಉಭಯ ಕೋಮಿನ ವಿದ್ಯಾರ್ಥಿಗಳನ್ನು ಕಾಲೇಜಿನ ಹೊರಗೆ ಕಳಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಾಧ್ಯಾಪಕರು, ಕಾಲೇಜಿಗೆ ರಜೆ ಕೊಡಲಾಗಿದೆ. ವಿವಾದ ಇತ್ಯರ್ಥವಾಗುವವರೆಗೆ ಯಾರೂ ಸಹ ಬರಕೂಡದು. ಎಲ್ಲ ವಿದ್ಯಾರ್ಥಿಗಳು ಮನೆಗಳಿಗೆ ತೆರಳಿ.
ಓದಿನ ಬಗ್ಗೆ ಗಮನ ಕೊಡಿ. ಆವರಣದ ಹೊರಗೂ ನಿಲ್ಲಬೇಡಿ. ಈ ಬಗ್ಗೆ ನಾವು ಆಡಳಿತ ಮಂಡಳಿ, ಜಿಲ್ಲಾಡಳಿತದ ಜೊತೆ ಚರ್ಚೆ ಮಾಡುತ್ತೇವೆ. ಯಾವುದೇ ಗೊಂದಲಕ್ಕೆ ಆಸ್ಪದ ಕೊಡಬೇಡಿ ಎಂದು ಮನವಿ ಮಾಡಿದರು.