ಉಡುಪಿ:ರಾಜ್ಯಾದ್ಯಂತ ಲಾಕ್ಡೌನ್ ತೆರವಾಗಿದ್ದು, ಜಿಲ್ಲೆಯಲ್ಲಿ ಈ ಹಿಂದಿನ ಆದೇಶದಂತೆ 14 ದಿನಗಳ ಕಾಲ ಹೊರ ಜಿಲ್ಲೆಯವರಿಗೆ ಉಡುಪಿಗೆ ಪ್ರವೇಶವಿರಲಿಲ್ಲ. ಆದೇಶ ವಾಪಸ್ ಪಡೆಯುತ್ತಿದ್ದಂತೆ ಜನರು ಇದರ ಲಾಭ ಪಡೆಯುತ್ತಿದ್ದಾರೆ.
ಕೋವಿಡ್ ಅವಧಿಯ ಕಠಿಣ ಕಾನೂನುಗಳನ್ನು ಉಲ್ಲಂಘಿಸುತ್ತಿದ್ದಾರೆ. ಇದನ್ನು ಮನಗಂಡ ಜಿಲ್ಲಾಧಿಕಾರಿ ಜಿ ಜಗದೀಶ್ ನಗರದ ಆಯಕಟ್ಟಿನ ಸ್ಥಳಗಳಿಗೆ ಭೇಟಿ ನೀಡಿ ನಿಯಮ ಉಲ್ಲಂಘಿಸಿದವರಿಗೆ ಎಚ್ಚರಿಕೆ ನೀಡಿದರು.
ಉಡುಪಿಯ ಕೆಲವು ಸ್ಥಳಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಈ ವೇಳೆ ಸರ್ವಿಸ್ ಬಸ್ ನಿಲ್ದಾಣಕ್ಕೆ ಜಿಲ್ಲಾಧಿಕಾರಿಗಳು ಆಗಮಿಸುತ್ತಿದ್ದಂತೆ ಕಾರಿನಲ್ಲಿದ್ದ ಯುವಕರ ಗುಂಪೊಂದು ಏಕಾಏಕಿ ಸ್ಥಳದಿಂದ ಪಲಾಯನಗೈದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಾಸ್ಕ್ ಧರಿಸದೆ ಇರುವುದು ಮಾತ್ರವಲ್ಲ ಗಾಂಜಾ ಸೇವನೆಯಂತಹ ಕಾನೂನುಬಾಹಿರ ಕೃತ್ಯದಲ್ಲಿ ಯುವಕರ ತಂಡ ತೊಡಗಿತ್ತು ಎಂದು ತಿಳಿದುಬಂದಿದೆ.
ಯುವಕರ ತಂಡವನ್ನು ಪತ್ತೆ ಮಾಡುವಂತೆ ಜಿಲ್ಲಾಧಿಕಾರಿ ಅವರು ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಅನಿರೀಕ್ಷಿತ ದಾಳಿಯಿಂದ ಕಾರು ಚಾಲಕರು, ಅಂಗಡಿ- ಹೋಟೆಲ್ ಮಾಲೀಕರು, ಸಾರ್ವಜನಿಕರು ಕಸಿವಿಸಿಗೊಂಡರು. ಮಸೀದಿ ರಸ್ತೆಯಲ್ಲಿರುವ ಮಾಲ್ವೊಂದರ ಮೇಲೆ ದಿಢೀರ್ ದಾಳಿ ನಡೆಸಿದ ವೇಳೆ ಅಲ್ಲಿನ ಮ್ಯಾನೇಜರ್ ಗಾಬರಿಯಿಂದ ಓಡಿದ ದೃಶ್ಯ ಕಂಡುಬಂತು.