ಉಡುಪಿ: ಅರಣ್ಯಾಧಿಕಾರಿಗಳು ಮಾಡಿದ ಯಡವಟ್ಟಿನಿಂದಾಗಿ ದಲಿತ ಕುಟುಂಬವೊಂದು ಸಂಕಷ್ಟಕ್ಕೆ ಸಿಲುಕಿರುವ ಘಟನೆ ಹೊಳೆನರಸೀಪುರದ ಅಂಬೇಡ್ಕರ್ ಕಾಲೋನಿಯಲ್ಲಿ ಕಂಡು ಬಂದಿದೆ.
ಇಲ್ಲಿನ ಅಂಬೇಡ್ಕರ್ ಕಾಲೋನಿಯ ನಿವಾಸಿ ಗಿಡ್ಡಯ್ಯ(87) ಎಂಬುವರ 2ನೇ ಮಗ ನರಸಿಂಹಮೂರ್ತಿ ಅವರು 1984ರಲ್ಲಿ ದಿನಗೂಲಿ ಅರಣ್ಯ ವೀಕ್ಷಕನಾಗಿ ಅರಣ್ಯ ಇಲಾಖೆಗೆ ಸೇರಿದ್ದರು. 1984ರ ಮೊದಲು ಕೆಲಸಕ್ಕೆ ಸೇರಿದ ದಿನಗೂಲಿ ನೌಕರರನ್ನು ಕೆಲಸದಿಂದ ತೆಗೆಯಬಾರದು ಎಂದು ಸುಪ್ರೀಂಕೋರ್ಟ್ ಆದೇಶವಿದ್ದರು ಸಹ ಇಲಾಖೆ ಇವರನ್ನು ಕೆಲಸದಿಂದ ವಜಾ ಮಾಡಿತ್ತು ಎನ್ನಲಾಗಿದೆ.
1991ರಲ್ಲಿ ಕಾರ್ಮಿಕ ನ್ಯಾಯಾಲಯ, ನರಸಿಂಹಮೂರ್ತಿಯನ್ನು ಮರುನೇಮಕ ಮಾಡಿ ನಿರುದ್ಯೋಗದ ದಿನಗಳನ್ನು ಸೇವಾವಧಿ ಎಂದು ಪರಿಗಣಿಸಿ ಸಂಬಳ ನೀಡುವಂತೆ ಆದೇಶಿಸಿತು. ಆದರೆ, ಮೂರ್ತಿಯವರಿಗೆ 7 ವರ್ಷಕ್ಕೆ ಸಂಬಳ ಸಿಕ್ಕಿದ್ದು ಮಾತ್ರ ₹45 ಸಾವಿರ ಮಾತ್ರ.
ಅರಣ್ಯ ಇಲಾಖೆ ವಿರುದ್ಧ ಹೇಮಲತಾ ಆಕ್ರೋಶ ಇದು ಮೂರ್ತಿ ಕಥೆಯಾದ್ರೆ ಗಿಡ್ಡಯ್ಯ ಅವರ 2ನೇ ಮಗಳು ಹೇಮಲತಾ, ಹೊಳೆನರಸೀಪುರದ ಅರಣ್ಯ ಇಲಾಖೆಯ ಪ್ರಾದೇಶಿಕ ಇಲಾಖೆಯಲ್ಲಿ 2007ರಲ್ಲಿ 1 ಸಾವಿರ ರೂಪಾಯಿಗೆ ಕಂಪ್ಯೂಟರ್ ಆಪರೇಟರ್ ಹುದ್ದೆಗೆ ಸೇರಿದ್ದು, 9 ವರ್ಷ ದುಡಿದ ನಂತರ ಅರಣ್ಯ ಇಲಾಖೆಯ ದರ ಪಟ್ಟಿಯಂತೆ ಸಂಬಳ ನೀಡಲು ವಿನಂತಿಸಿದ್ರು. ಆದರೆ, ಹೇಮಲತಾಗೆ 2016ರಲ್ಲಿ ಮಾನಸಿಕ ಹಿಂಸೆ ನೀಡಿ ಕೆಲಸದಿಂದ ವಜಾ ಮಾಡಲಾಗಿದೆ ಎನ್ನಲಾಗಿದೆ.
ಗಿಡ್ಡಯ್ಯ ಕುಟುಂಬದ ಎರಡು ಮಕ್ಕಳಿಗೆ ಕಳೆದ 36 ವರ್ಷಗಳಿಂದ ಅರಣ್ಯ ಇಲಾಖೆ ದ್ರೋಹ ಮಾಡಿರುವ ಜೊತೆಗೆ ಅಕ್ರಮ ನಡೆಸಿದೆ ಎಂದು ಸಂತ್ರಸ್ತರ ಕುಟುಂಬದವರು ಆರೋಪಿಸಿದ್ದಾರೆ. ಈ ದಲಿತ ಕುಟುಂಬದ ಪರ ಉಡುಪಿಯ ಮಾನವ ಹಕ್ಕು ಪ್ರತಿಷ್ಠಾನದ ಅಧ್ಯಕ್ಷ ರವೀಂದ್ರನಾಥ ಶ್ಯಾನುಭಾಗ್ ಹೋರಾಟಕ್ಕೆ ಇಳಿದಿದ್ದು, ಅರಣ್ಯ ಇಲಾಖೆಯ ಅಕ್ರಮ ದಾಖಲೆ ಸಹಿತ ತೆರೆದಿಟ್ಟಿದ್ದಾರೆ. ಮೂರು ದಶಕಗಳ ಕಾಲ ಅರಣ್ಯ ಇಲಾಖೆ ಅಧಿಕಾರಿಗಳಿಂದ ಸಂಕಷ್ಟ ಎದುರಿಸಿದ ಗಿಡ್ಡಯ್ಯ ಕುಟುಂಬ ಇದೀಗ ನ್ಯಾಯಕ್ಕಾಗಿ ಮಾನವ ಹಕ್ಕು ಪ್ರತಿಷ್ಠಾನ ಆಶ್ರಯಿಸಿದೆ.