ಉಡುಪಿ:ಕೊರೊನಾ 2ನೇ ಅಲೆಯ ಆತಂಕ ಪ್ರತೀ ದಿನ ಹೆಚ್ಚಾಗುತ್ತಿರುವ ಬೆನ್ನಲ್ಲೇ ವ್ಯಾಕ್ಸಿನ್ ಕೊರತೆ ತಲೆನೋವಾಗಿದೆ. ನಿತ್ಯ ವ್ಯಾಕ್ಸಿನ್ ಪಡೆದುಕೊಳ್ಳಲು ಬರುವವರಲ್ಲಿ ಹೆಚ್ಚಿನ ಮಂದಿ ವ್ಯಾಕ್ಸಿನ್ ಇಲ್ಲದೆ ವಾಪಸ್ ಆಗುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಕ್ಕೂ ಇದು ಕಾರಣವಾಗಿದೆ.
ಕೊರೊನಾ ಮೊದಲನೇ ಅಲೆಯಲ್ಲಿ ವ್ಯಾಕ್ಸಿನ್ ಪಡೆಯಲು ಹಿಂದೇಟು ಹಾಕುತ್ತಿದ್ದ ಜನರು ಕೊರೊನಾ 2ನೇ ಅಲೆಯಲ್ಲಿ ಲಸಿಕೆ ಪಡೆಯಲು ಮುಂದೆ ಬರುತ್ತಿದ್ದಾರೆ. ನಿತ್ಯ ಜನ ವ್ಯಾಕ್ಸಿನ್ಗೆ ಸರದಿ ನಿಲ್ಲುತ್ತಿದ್ದಾರೆ. ಆದ್ರೆ ಜಿಲ್ಲಾಸ್ಪತ್ರೆಯಲ್ಲಿ ಮಾತ್ರ ಬೇಡಿಕೆಯಷ್ಟು ವ್ಯಾಕ್ಸಿನ್ ಇಲ್ಲದಂತಾಗಿದೆ. ಹೀಗಾಗಿ ವ್ಯಾಕ್ಸಿನ್ಗಾಗಿ ಕಾದು ಸುಸ್ತಾದ ಹಿರಿಯ ನಾಗರಿಕರು ವ್ಯಾಕ್ಸಿನ್ ಇಲ್ಲ ಅನ್ನೋ ಮಾತು ಕೇಳಿ ಆಕ್ರೋಶ ಹೊರಹಾಕುತ್ತಿದ್ದಾರೆ.
ಸಾಲಲ್ಲಿ ಕಾದು ನಿಂತರೂ ಸಿಗುತ್ತಿಲ್ಲ ಲಸಿಕೆ ಇನ್ನು ಜಿಲ್ಲೆಗೆ ಬಂದ 12 ಸಾವಿರ ವ್ಯಾಕ್ಸಿನ್ಗಳನ್ನ ವಿವಿಧ ತಾಲೂಕು ಆಸ್ಪತ್ರೆಗೆ ಹಂಚಲಾಗಿದೆ. ಹೀಗಾಗಿ ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ನೋಂದಣಿ ಮಾಡಿದ ಹೆಚ್ಚಿನ ಜನರು ವ್ಯಾಕ್ಸಿನ್ ಸಿಗದೇ ಹಿಂದಿರುಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಆಕ್ರೋಶ ವ್ಯಕ್ತವಾಗಿದೆ. ಇಂದು ಒಂದೇ ದಿನ 9 ಸಾವಿರ ಡೋಸ್ ನೀಡಿರುವ ಕಾರಣ ಇನ್ನೂ 20ಸಾವಿರ ವ್ಯಾಕ್ಸಿನ್ ಬರುವವರೆಗೂ ಇನ್ನಷ್ಟು ವ್ಯಾಕ್ಸಿನ್ ಕೊರತೆ ಎದುರಾಗಲಿದೆ. ಉಡುಪಿ ಜಿಲ್ಲೆಯಲ್ಲಿ ವ್ಯಾಕ್ಸಿನ್ ಬೇಡಿಕೆ ಹೆಚ್ಚಿರುವ ಕಾರಣ ಸರ್ಕಾರ ವ್ಯಾಕ್ಸಿನ್ ಪೂರೈಕೆ ಶೀಘ್ರವಾಗಿ ಮಾಡಬೇಕು ಹಾಗೂ ಹೆಚ್ಚು ವ್ಯಾಕ್ಸಿನ್ ಪೂರೈಸಬೇಕಿದೆ ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಬೇಡಿಕೆಯಾಗಿದೆ.
ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಹೆಚ್ಚಾಗ್ತಿರೋದು ಒಂದು ಕಡೆಯಾದರೆ ವ್ಯಾಕ್ಸಿನ್ ಕೊರತೆ ಇದೀಗ ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. 11 ಲಕ್ಷ ಜನಸಂಖ್ಯೆಯಿರುವ ಉಡುಪಿ ಜಿಲ್ಲೆಗೆ 12 ಸಾವಿರ ಲಸಿಕೆ ಸಾಕಾಗಲ್ಲ. ಮೇ 1 ರಿಂದ 18ವರ್ಷ ಮೇಲ್ಪಟ್ಟವರಿಗೂ ಲಸಿಕೆಯಿರುವ ಕಾರಣ ಹೆಚ್ಚು ಲಸಿಕೆ ಪೂರೈಸುವ ಅನಿವಾರ್ಯತೆ ಎದುರಾಗಿದೆ.