ಉಡುಪಿ: ಮಧ್ವಾಚಾರ್ಯರ ಶಿಷ್ಯ ವಾಮನ ತೀರ್ಥರ ಪರಂಪರೆಯ ಶಿರೂರು ಮಠದ 32ನೇ ಪೀಠಾಧಿಪತಿಯಾಗಿ ಶ್ರೀ ವೇದವರ್ಧನ ತೀರ್ಥರಿಗೆ ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ನಿನ್ನೆ(ಶುಕ್ರವಾರ) ಮಧ್ಯಾಹ್ನ 12.30ರ ಸುಮೂರ್ತದಲ್ಲಿ ಪಟ್ಟಾಭಿಷೇಕ ನೆರವೇರಿಸಿದರು.
ಈ ಸಂರ್ಭದಲ್ಲಿ ಅಶೀರ್ವಚನ ನೀಡಿದ ಸೋದೆ ಶ್ರೀಗಳು, ಸನ್ಯಾಸಿಗಳಿಗೆ ಪ್ರಧಾನ ಅನುಷ್ಠಾನ ಪ್ರಣವ ಮಂತ್ರ. ಇದು ವೇದದ ಸಾರಭಾಗ, ಭಾರತೀಯ ತತ್ವ ಶಾಸ್ತ್ರಗಳಿಗೆ ವೇದವೇ ಅಡಿಪಾಯವಾಗಿದ್ದು, ನೂತನ ಯತಿಗಳು ಈ ಸನಾತನ ಪರಂಪರೆಯನ್ನು ಬೆಳಗಲಿ ಎಂಬ ಉದ್ದೇಶದಿಂದ ವೇದವರ್ಧನ ತೀರ್ಥ ಎಂದು ನಾಮಕರಣ ಮಾಡಿದ್ದೇವೆ. ಇದರೊಂದಿಗೆ ಮಠದ ಪರಂಪರೆ ಹಾಗೂ ಶ್ರೀಗಳ ಕೀರ್ತಿಯೂ ವರ್ಧಿಸಲಿ ಎಂದು ಹಾರೈಸಿದರು.
ಜವಾಬ್ದಾರಿ ನಿರ್ವಹಣೆ: ಲಕ್ಷ್ಮೀವರ ತೀರ್ಥರು ವೃಂದಾವನವಾದ ಬಳಿಕ ಎರಡು ಮುಕ್ಕಾಲು ವರ್ಷ ಶಿರೂರು ಮಠವನ್ನು ಪ್ರಾಮಾಣಿಕವಾಗಿ ಮುನ್ನಡೆಸಿದ್ದೇವೆ. ನಮ್ಮ ಕಾರ್ಯಗಳೆಲ್ಲವೂ ದೇವರು ಹಾಗೂ ಮುಖ್ಯಪ್ರಾಣದೇವರ ಚಿತ್ತದಲ್ಲಿದೆ ಎಂದು ಸೋದೆ ಶ್ರೀಗಳು ಹೇಳಿದರು.