ಉಡುಪಿ:ಮಂಗಳೂರಲ್ಲಿ ಕೊರೊನಾ ವೈರಸ್ ವ್ಯಕ್ತಿಯಲ್ಲಿ ಕಂಡು ಬಂದಿರುವ ಹಿನ್ನೆಲೆಯಲ್ಲಿ ವಾಹನಗಳು ಉಡುಪಿ ಜಿಲ್ಲೆಯನ್ನು ಪ್ರವೇಶಿಸದಂತೆ ಹೆಜಮಾಡಿ ಗಡಿಯಲ್ಲೇ ಪೊಲೀಸರು ತಡೆದಿದ್ದಾರೆ.
ಕೊರೊನಾ ಆಪತ್ತು: ಮಂಗಳೂರು ಪ್ರವೇಶಿಸದಂತೆ ಹೆಜಮಾಡಿ ಗಡಿಯಲ್ಲೇ ವಾಹನ ತಡೆದ ಪೊಲೀಸರು - ಉಡುಪಿಯಲ್ಲಿ ಕೊರೊನಾ ಭೀತಿ
ಮಂಗಳೂರಲ್ಲಿ ಕೊರೊನಾ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಅಲ್ಲಿಂದ ಉಡುಪಿಗೆ ಪ್ರವೇಶಿಸುವ ವಾಹನಗಳು ಹಾಗೂ ಉಡುಪಿಯಿಂದ ಮಂಗಳೂರಿಗೆ ಹೋಗುವ ವಾಹನಗಳನ್ನು ಹೆಜಮಾಡಿ ಗಡಿಯಲ್ಲೇ ಪೊಲೀಸರು ತಡೆ ಹಿಡಿಯುತ್ತಿದ್ದಾರೆ.

ಮಂಗಳೂರಿನಿಂದ ಬರುವ ವಾಹನಗಳಿಗೆ ಉಡುಪಿ ಜಿಲ್ಲೆಗೆ ಪ್ರವೇಶ ನಿರಾಕರಿಸಲಾಗಿದ್ದು, ಪೊಲೀಸರ ಜೊತೆ ಪ್ರಯಾಣಿಕರು ವಾಗ್ವಾದ ನಡೆಸುತ್ತಿರುವ ದೃಶ್ಯಗಳು ಕಂಡು ಬಂದವು. ದ್ವಿಚಕ್ರ ವಾಹನವೂ ಸೇರಿ ಯಾವುದೇ ವಾಹನಗಳನ್ನು ಪೊಲೀಸರು ಗಡಿ ದಾಟಲು ಬಿಡುತ್ತಿಲ್ಲ. ಸಂಚಾರ ಸ್ಥಗಿತಗೊಂಡಿರುವ ಮಾಹಿತಿ ಇಲ್ಲದೆ ಬಂದಿರುವ ಹೊರ ಜಿಲ್ಲೆಯ ಪ್ರಯಾಣಿಕರು ಪರದಾಡುತ್ತಿದ್ದಾರೆ.
ರಸ್ತೆ ತಡೆದಿರುವ ಕಾರಣ ಹೆಜಮಾಡಿಯಲ್ಲಿ ವಾಹನದಟ್ಟಣೆ ಉಂಟಾಗಿದ್ದು, ಜನರ ಒತ್ತಡ ತೀವ್ರಗೊಂಡ ಹಿನ್ನೆಲೆಯಲ್ಲಿ ವಾಹನ ನಿಷೇಧ ಸಡಿಲಿಸಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿ ಅವರ ಸ್ಪಷ್ಟ ಆದೇಶವಿಲ್ಲದ ಕಾರಣ ಪೊಲೀಸರಿಗೂ ವಾಹನ ತಡೆಯಲು ಸಾಧ್ಯವಾಗುತ್ತಿಲ್ಲ. ರಜೆ ಆರಂಭವಾದ ಕಾರಣ ಹಾಸ್ಟೆಲ್ಗಳಲ್ಲಿರುವ ವಿದ್ಯಾರ್ಥಿಗಳನ್ನು ಕರೆತರಲು ಹೊರಟ ಪೋಷಕರಿಗೆ ಸಂಕಷ್ಟ ಎದುರಾಗಿದೆ. ಸ್ಪಷ್ಟ ಯೋಜನೆ ರೂಪಿಸದೆ ರಸ್ತೆ ತಡೆಯಲು ಮುಂದಾದ ಪೊಲೀಸರು ಪೇಚಿಗೆ ಸಿಲುಕಿದ್ದಾರೆ.