ಉಡುಪಿ: ಉಡುಪಿ ಪಲಿಮಾರು ಮಠದ ವಿದ್ಯಾಧೀಶತೀರ್ಥ ಸ್ವಾಮೀಜಿ ಕಮಿಷನ್ ಆರೋಪದ ಬಗ್ಗೆ ಮಾತನಾಡಿ, ದೇಶದಲ್ಲಿ ದೇವಾಲಯಗಳ ಸಂಖ್ಯೆ ಕಡಿಮೆಯೇನಿಲ್ಲ. ದೇವಾಲಯದ ಸಂಪಾದನೆಯೂ ಅಲ್ಪ ಅನ್ನೋ ಹಾಗಿಲ್ಲ. ಎ ಗ್ರೇಡ್ ದೇವಾಲಯಗಳಿಂದ ಬರುವ ಸಂಪತ್ತು ಸದ್ವಿನಿಯೋಗವಾಗಬೇಕು. ಹಿಂದಿನ ಸರ್ಕಾರದ ಕಾಲದಲ್ಲಿ ಆ ಸಂಪತ್ತು ಎಲ್ಲೆಲ್ಲೋ ಹೋಗುತ್ತಿತ್ತು ಎಂದಿದ್ದಾರೆ.
ಬಡ ದೇವಾಲಯ ಹಾಗೂ ಮಠ ಮಂದಿರಗಳಿಗೆ ಸಮಸ್ಯೆಯಾದಾಗ ಈ ದೇವಾಲಯಗಳ ಸಂಪತ್ತು ಮುಟ್ಟಿಸಬೇಕು. ಈಗಿನ ಬೊಮ್ಮಾಯಿ ಸರ್ಕಾರ ದೇವಾಲಯಗಳ ಸಂಪತ್ತು ಬಡ ದೇವಾಲಯ ಮಠ ಮಂದಿರಗಳಿಗೆ ತಲುಪಿಸುವ ಕಾಳಜಿ ಇಟ್ಟುಕೊಂಡಿದೆ. ಕಾಶಿಯಾತ್ರೆ ಮಾಡುವವರಿಗೂ ಧನಸಹಾಯ ನೀಡುತ್ತಿರುವುದು ನಿಜವಾಗಿ ಅಭಿನಂದನೀಯ. ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ನಮ್ಮ ಪಲಿಮಾರು ಮಠಕ್ಕೂ ಧನಸಹಾಯ ಘೋಷಿಸಿದ್ರು. ಆ ಧನಸಹಾಯ ನೀಡುವ ವೇಳೆ ಯಾರೂ ಕೂಡ ಫಲಾಪೇಕ್ಷೆ ಪಡೆದಿಲ್ಲ. ಶಾಸಕರು, ಮಂತ್ರಿಗಳು ಹಾಗೂ ಮುಜರಾಯಿ ವ್ಯವಸ್ಥೆ ಯಾವುದರಲ್ಲೂ ಸ್ವಾರ್ಥ ಧೋರಣೆ ಕಂಡುಬಂದಿಲ್ಲ ಎಂದು ಹೇಳಿದರು.