ಉಡುಪಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ದಿನವಿಡೀ ಉಡುಪಿ ಜಿಲ್ಲಾ ಪ್ರವಾಸ ಮಾಡಿದರು. ಜತೆಗೆ ಜಿಲ್ಲೆಯ ಕುಂತಲ ನಗರದಲ್ಲಿ ಮಾಧವ ನಗರದಿಂದ ಬಂಟಕಲ್ಲು ರಸ್ತೆ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿದರು. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಒಟ್ಟು 6.36 ಕಿ.ಮೀ ಉದ್ದದ ರಸ್ತೆಯನ್ನು 4.6 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡುವ ಯೋಜನೆ ಇದಾಗಿದೆ.
ನಂತರ ಮಾತನಾಡಿದ ಸಿಎಂ, ಕೇಂದ್ರದ ಪ್ರಮಾಣೀಕರಣದ ನಂತರ ಮಕ್ಕಳಿಗೆ ಕೋವಿಡ್ ಲಸಿಕೆ ಅಭಿಯಾನ ಆರಂಭಿಸಲಾಗುವುದು. ಮಕ್ಕಳಿಗೆ ಕೋವಿಡ್ ಲಸಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಸಕ್ಷಮ ಪ್ರಾಧಿಕಾರದ ಪ್ರಮಾಣೀಕರಣದ ನಿರೀಕ್ಷೆಯಲ್ಲಿದ್ದೇವೆ. ಮಕ್ಕಳು ಮತ್ತು ಹದಿ ಹರೆಯದವರಿಗೆ ಕೋವಿಡ್ ಲಸಿಕೆ ಪರೀಕ್ಷೆ ಕೊನೆಯ ಹಂತ ತಲುಪಿದೆ. ಇದಕ್ಕೆ ಒಪ್ಪಿಗೆ ಸಿಕ್ಕ ತಕ್ಷಣ ಲಸಿಕೆ ಹಾಕಲಾಗುವುದು ಎಂದರು.
ಈಗಾಗಲೇ ಲಸಿಕೆ ಕಾರ್ಯಕ್ರಮದಲ್ಲಿ ಕರ್ನಾಟಕ ಮುಂದಿದ್ದು, ಶೇ. 82 ರಷ್ಟು ಮೊದಲ ಡೋಸ್ ಹಾಗೂ ಶೇ.37 ರಷ್ಟು 2ನೇ ಡೋಸ್ ಲಸಿಕೆ ನೀಡಲಾಗಿದೆ. ಡಿಸೆಂಬರ್ ಅಂತ್ಯಕ್ಕೆ ಶೇ. 90 ರಷ್ಟು ಮೊದಲನೇ ಹಾಗೂ ಶೇ. 75 ರಷ್ಟು 2ನೇ ಡೋಸ್ ಲಸಿಕೆಯನ್ನು ಹಾಕುವ ಗುರಿಯನ್ನು ಹೊಂದಲಾಗಿದೆ ಎಂದರು.