ಉಡುಪಿ: ಸಿಎಂ ಬೊಮ್ಮಾಯಿ ಇಂದು ಉಡುಪಿ ಪ್ರವಾಸ ಕೈಗೊಂಡಿದ್ದರು. ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಾರಂಭದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಅವರು ವಿಶೇಷ ಪೂಜೆ ಸಲ್ಲಿಸಿದರು. ನಂತರ ಕಾರ್ಕಳ ತೆರಳಿ ಹೆಬ್ರಿ ಮಿನಿವಿಧಾನ ಸೌಧ ಮತ್ತು ಏತ ನೀರಾವರಿ ಪ್ರಾಜೆಕ್ಟ್ನ್ನು ಉದ್ಘಾಟನೆ ಮಾಡಿದರು. ನಂತರ ಹೆಬ್ರಿ ಬಸ್ ನಿಲ್ದಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಸಿಎಂ ನಮ್ಮ ನೆಚ್ಚಿನ ನಾಯಕರ ಸರ್ಕಾರಕ್ಕೆ 8 ವರ್ಷ ಪೂರ್ಣ ಆಗಿದೆ. ಎಂಟು ವರ್ಷದ ಸಂಭ್ರಮ ಬಹಳ ಮುಖ್ಯ. ಆಜಾದಿ ಕಾ ಅಮೃತ್ ಮಹೋತ್ಸವ ಸಂದರ್ಭ ಆತ್ಮಾವಲೋಕನ ಸಿಂಹಾವಲೋಕನ ಮಾಡಬೇಕಾಗಿದೆ. ಮುಂದಿನ 25 ವರ್ಷದ ಸಂಕಲ್ಪ ಬಹಳ ಮುಖ್ಯ. ಮೋದಿ ಅಧಿಕಾರಾವಧಿಯ ಅಭಿವೃದ್ಧಿ ಚರ್ಚೆ ಆಗಬೇಕಿದೆ. ದೇಶದ ಭವಿಷ್ಯದ ಸುರಕ್ಷತೆ, ದೇಶದ ಸಮೃದ್ಧಿಗೆ ಮೋದಿ ಅವಶ್ಯಕ. ದೇಶದಲ್ಲಿ ಮೂರು ವಿಚಾರ ಬಹಳ ಪ್ರಾಮುಖ್ಯ. ಕೋವಿಡ್ ಸಂದರ್ಭದಲ್ಲಿ ಆತ್ಮನಿರ್ಭರ ಭಾರತ ಘೋಷಣೆಯಾಯ್ತು. ಮೇಕ್ ಇನ್ ಇಂಡಿಯಾಕ್ಕೆ ಬಹಳ ಒತ್ತು ಕೊಡಲಾಗುತ್ತಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ವರದಿ ಪಡೆದು ತೀರ್ಮಾನ: ಪಠ್ಯಪುಸ್ತಕ ಪರಿಷ್ಕರಣೆ ಚರ್ಚೆ ವಿಚಾರವಾಗಿ ಮಾತನಾಡಿದ ಸಿಎಂ, ಶಿಕ್ಷಣ ಸಚಿವರ ಬಳಿ ಸಮಗ್ರ ವರದಿ ಕೇಳಿದ್ದೇನೆ. ಸ್ವಾಮೀಜಿಗಳು ಪತ್ರ ಬರೆದಿದ್ದಾರೆ - ಅವರೊಂದಿಗೆ ಮಾತನಾಡಿದ್ದೇನೆ ಎರಡು ವರ್ಗದ ಬೇರೆ ಬೇರೆ ಚರ್ಚೆ ಇದೆ. ಪರಿಷ್ಕರಣೆ ಸರಿ ಮತ್ತು ತಪ್ಪು ಎಂಬ ಚರ್ಚೆಗಳು ನಡೆಯುತ್ತಿವೆ. ಸಚಿವರು ನಾಳೆ ವರದಿ ಕೊಡುತ್ತಾರೆ. ವರದಿ ಬಂದ ಮೇಲೆ ತೀರ್ಮಾನ ಮಾಡುತ್ತೇವೆ. ಸಾಹಿತಿಗಳು, ಸ್ವಾಮಿಗಳು ಪತ್ರ ಬರೆದಿದ್ದಾರೆ. ಪಾಠ ವಾಪಸ್ ಪಡೆಯಬೇಕು ಎಂದವರ ಬಳಿ ಮಾತನಾಡುತ್ತೇನೆ.