ಉಡುಪಿ: ಉಡುಪಿಯ ಕೃಷ್ಣ ದೇವರ ಸಾನ್ನಿಧ್ಯ ವೃದ್ಧಿಗೆ ಬ್ರಹ್ಮಕಲಶೋತ್ಸವ ನೆರವೇರಿಸಲಾಗಿದ್ದು, ಸುವರ್ಣ ಗೋಪುರ ಸಮರ್ಪಣೆಯ ಪ್ರಯುಕ್ತ ಇಂದು ಅಭೂತಪೂರ್ವ ಅಭಿಷೇಕ ಮಾಡಲಾಯಿತು.
ಚಿನ್ನದರಮನೆಯಲ್ಲಿ ಕುಳಿತ ಕೃಷ್ಣನ ನೋಡಲು ಹರಿದು ಬರುತ್ತಿದೆ ಜನಸಾಗರ
ಉಡುಪಿಯ ಕೃಷ್ಣ ಮಠದಲ್ಲಿ ಬ್ರಹ್ಮಕಲಶಾಭಿಷೇಕ ನಡೆಯುತ್ತಿದ್ದು, ಇಷ್ಟ ದೇವರ ಅಭಿಷೇಕ ನೋಡುವುದಕ್ಕೆ ಜನಸಾಗರವೇ ಹರಿದು ಬರುತ್ತಿದೆ.
ಬ್ರಹ್ಮಕಲಶಾಭಿಷೇಕ ಯಾವುದೇ ಕ್ಷೇತ್ರದಲ್ಲಿ ನಡೆಯಬಹುದಾದ ಅತೀ ದೊಡ್ಡ ಧಾರ್ಮಿಕ ಪ್ರಕ್ರಿಯೆ. ಹಾಗಾಗಿ ಇಷ್ಟ ದೇವರ ಅಭಿಷೇಕ ಕಾಣುವುದಕ್ಕೆ ಜನಸಾಗರವೇ ಹರಿದು ಬರುತ್ತಿದೆ. ಚಿನ್ನದ ಅರಮನೆಯಲ್ಲಿ ಕುಳಿತ ಕೃಷ್ಣನಿಗೆ ಅಷ್ಟಮಠಾಧೀಶರಿಂದ ನಡೆಯುವ ಈ ಅಭಿಷೇಕ ಕಾಣುವುದೇ ಕಣ್ಣಿಗೆ ಹಬ್ಬ. ಸುಮಾರು ಎರಡು ಗಂಟೆಗಳ ಕಾಲ ಶುದ್ಧೋದಕ, ಗಂಧೋದಕ, ಪಂಚಗವ್ಯ ಸಹಿತ ನಾನಾ ಬಗೆಯ ತೀರ್ಥಗಳಿಂದ ಅಭಿಷೇಕ ನಡೆಸಲಾಯಿತು. ಗರ್ಭಗುಡಿಯ ಹೊರ ಭಾಗದಲ್ಲಿ ಕಲಶಗಳ ಪೂಜೆ ನಡೆದರೆ, ರಥಬೀದಿಯ ಸುತ್ತಲೂ ವಿವಿಧ ಸಂಕೀರ್ತನೆಗಳು ನಡೆದವು. ಈ ವಿಶೇಷ ಪೂಜೆಯ ಬಳಿಕ ಸುವರ್ಣ ಗೋಪುರ ಸಮರ್ಪಣೆಯ 10 ದಿನದ ಧಾರ್ಮಿಕ ಕಾರ್ಯಕ್ರಮಗಳಿಗೆ ತೆರೆಬಿದ್ದಿದೆ.
ಇನ್ನು ಪರ್ಯಾಯ ಪಲಿಮಾರು ಮಠವು ಉಡುಪಿಯ ಕೃಷ್ಣನನ್ನು ‘ಸ್ವರ್ಣ ಕೃಷ್ಣ’ನನ್ನಾಗಿ ಮಾಡಿದ ಹೆಗ್ಗಳಿಕೆ ಪಾತ್ರವಾಗಿದೆ. ಪರಮಗುರುಗಳಾದ ವಿದ್ಯಾಮಾನ್ಯ ತೀರ್ಥರು ವಜ್ರದ ಕಿರೀಟ, ಚಿನ್ನದ ರಥ ಅರ್ಪಿಸಿದ್ದರೆ, ಸದ್ಯ ಪರ್ಯಾಯ ಪೀಠಸ್ಥರಾದ ವಿದ್ಯಾಧೀಶ ತೀರ್ಥರು 16 ವರ್ಷಗಳ ಹಿಂದೆ ವಜ್ರದ ಕವಚ ಮತ್ತು ಈಗ ಚಿನ್ನ ಗೋಪುರ ಅರ್ಪಿಸಿ ವಿಶೇಷ ಸೇವೆ ಸಲ್ಲಿಸಿದ್ದಾರೆ.