ಉಡುಪಿ:ಜಿಲ್ಲೆಯ ಬೆಳ್ಳಂಪಳ್ಳಿ ಮೂಲದ ಮಿಸ್ ಇಂಡಿಯಾ ಸಿನಿ ಶೆಟ್ಟಿಗೆ ತವರೂರಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ. ಮಿಸ್ ಇಂಡಿಯಾ ಆಗಿ ಆಯ್ಕೆಯಾದ ಬಳಿಕ ಪ್ರಥಮ ಬಾರಿಗೆ ತವರಿಗೆ ಆಗಮಿಸಿದ ಸಿನಿ ಶೆಟ್ಟಿಯನ್ನು ನಗರದ ಜೋಡು ಕಟ್ಟೆ ಮೂಲಕ ಭವ್ಯ ಸ್ವಾಗತ ಕೋರಲಾಯಿತು. ಅಭಿಮಾನಿಗಳು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿ ಅದ್ಧೂರಿಯಾಗಿ ಬರಮಾಡಿಕೊಂಡರು.
ತಂದೆ ಸದಾನಂದ ಶೆಟ್ಟಿ, ತಾಯಿ ಹೇಮ ಶೆಟ್ಟಿ ಜೊತೆಗೆ ಮೆರವಣಿಗೆಯಲ್ಲಿ ಆಗಮಿಸಿದ ಊರ ಮಗಳನ್ನು ನಗರದ ಅಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಬಂಟರ ಸಂಘದಿಂದ ಸನ್ಮಾನಿಸಲಾಯಿತು. ಸಭಾಂಗಣದ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಮಿಸ್ ಇಂಡಿಯಾ ಅಜ್ಜಿಯನ್ನು ಕಂಡು ಭಾವುಕರಾದರು.
ಅಜ್ಜಿಯನ್ನು ಬಿಗಿದಪ್ಪಿಕೊಂಡು, ಮಾತನಾಡಿಸಿದ ಸಿನಿ ಶೆಟ್ಟಿ, ನನ್ನ ಬಾಲ್ಯದಿಂದಲೂ ಅಜ್ಜಿ ನನಗೆ ಬೆಂಬಲವಾಗಿದ್ದರು. ನಾನು ಎಲ್ಲೇ ಹೋದರು ಯಾವುದೇ ಉಡುಗೆ ತೊಟ್ಟರೂ ನನಗೆ ಪ್ರೋತ್ಸಾಹ ನೀಡುತ್ತಿದ್ದರು. ಅವರು ನನ್ನ ಜೊತೆ ಯಾವಾಗಲೂ ಇರುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ. ನನ್ನ ಅಜ್ಜಿ ನನಗೆ ತುಂಬಾ ಪ್ರೇರೇಪಣೆ ನೀಡುತ್ತಿದ್ದರು. ಇವತ್ತು ಎಲ್ಲರೂ ನನ್ನನ್ನು ಗುರುತಿಸಿರುವ ಬಗ್ಗೆ ತುಂಬಾ ಖುಷಿಯಾಗಿದೆ. ಊರಿನಲ್ಲಿ ನನಗೆ ಸಿಕ್ಕಿರುವ ಸ್ವಾಗತಕ್ಕೆ ಸಂತೋಷವಾಗಿದೆ.
ಎಲ್ಲರ ಆಶೀರ್ವಾದದಿಂದ ನಾನು ಈ ಸಾಧನೆ ಮಾಡಿದ್ದೇನೆ. ಕಟೀಲು ದೇವಿಯ ದರ್ಶನ ಮಾಡಿ ಬಂದಿದ್ದೇನೆ. ಮನೆಗೆ ಹೋಗಿ ಅಜ್ಜಿಯ ಜೊತೆ ಕುಳಿತು ಮಾತನಾಡಬೇಕು. ಈಗಾಗಲೇ ನಾನು ಎರಡು ಮೂರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಅನೇಕ ಸಾಮಾಜಿಕ ಕಾರ್ಯ ಮಾಡುವ ಉತ್ಸಾಹವಿದೆ. ಮಿಸ್ ಇಂಡಿಯಾ ಪುಟದಲ್ಲಿ ಈ ಬಗ್ಗೆ ಅಧಿಕೃತವಾಗಿ ಹೇಳುತ್ತೇನೆ ಅಂತಾ ಸಿನಿ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.