ಉಡುಪಿ:ಜಿಲ್ಲೆಯಲ್ಲಿ ನಡೆದ 'ಹೋಮಕುಂಡ ಹತ್ಯೆ' ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್ ನೀಡಿದೆ.
ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಿರಂಜನ ಭಟ್ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ಕೋರ್ಟ್, ಅರ್ಜಿಯ ಕುರಿತು ಎರಡು ವಾರಗಳೊಳಗಾಗಿ ಉತ್ತರ ನೀಡುವಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ. ನ್ಯಾಯಮೂರ್ತಿಗಳಾದ ಎಸ್.ಎಸ್.ಬೋಪಣ್ಣ ಹಾಗು ನ್ಯಾ.ವಿ.ರಾಮ ಸುಬ್ರಹ್ಮಣ್ಯಂ ಅವರನ್ನೊಳಗೊಂಡ ನ್ಯಾಯಪೀಠವು ಈ ನೋಟಿಸ್ ನೀಡಿದೆ.
2016ರಲ್ಲಿ ಉಡುಪಿಯ ಉದ್ಯಮಿ ಭಾಸ್ಕರ್ ಶೆಟ್ಟಿಯನ್ನು ಹತ್ಯೆ ಮಾಡಿ ಹೋಮಕುಂಡದಲ್ಲಿ ಶವವನ್ನು ಸುಟ್ಟು ಹಾಕಲಾಗಿತ್ತು. ಈ ಪ್ರಕರಣದಲ್ಲಿ ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿಗೆ ಈಗಾಗಲೇ ಜಾಮೀನು ದೊರೆತಿದೆ. ಪ್ರಮುಖ ಆರೋಪಿ ನಿರಂಜನ ಭಟ್ ಜಾಮೀನು ಸಿಗದ ಹಿನ್ನೆಲೆಯಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದ. ಆದರೆ ಈ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಅಲ್ಲದೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ವಸ್ತುಗಳನ್ನು ವಶಕ್ಕೆ ಪಡೆದಿಲ್ಲ. ಮಾತ್ರವಲ್ಲ, ಹಲವು ಸಾಕ್ಷಿಗಳನ್ನೂ ಇನ್ನಷ್ಟೇ ವಿಚಾರಣೆಗೆ ಒಳಪಡಿಸಬೇಕಾಗಿದೆ.
ಈ ಪ್ರಕ್ರಿಯೆಯನ್ನು ಮುಗಿಸಲು ಇನ್ನೂ ಆರು ತಿಂಗಳ ಕಾಲಾವಕಾಶ ಬೇಕು. ನಂತರ ಜಾಮೀನು ಅರ್ಜಿ ಸಲ್ಲಿಸಿ ಎಂದು ಹೈಕೋರ್ಟ್ ಸೂಚನೆ ನೀಡಿತ್ತು. ಹೈಕೋರ್ಟ್ ಆದೇಶದ ಸಿಂಧುತ್ವವನ್ನು ಪ್ರಶ್ನಿಸಿ ನಿರಂಜನ ಭಟ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ. ಈ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.