ಉಡುಪಿ:ಬರೋಬ್ಬರಿ 12 ವರ್ಷಗಳ ಹಿಂದೆ ಜಿಲ್ಲೆಯ ಹೆಬ್ರಿ ಸಮೀಪದ ಬೆಳಂಜೆ ತೆಂಕೋಲದಲ್ಲಿ ನಡೆದ ಭಾಗೀರಥಿ (32) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರಾಸಿಕ್ಯೂಷನ್ ಆರೋಪವನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ. ಇದರಿಂದ ಪತಿ ಡಾ.ಸುರೇಶ್ ಪ್ರಭು ಸೇರಿ ಆರು ಆರೋಪಿಗಳನ್ನು ಖುಲಾಸೆಗೊಳಿಸಿ ಉಡುಪಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ದಿನೇಶ್ ಹೆಗ್ಡೆ ಆದೇಶಿಸಿದ್ದಾರೆ.
2010ರಲ್ಲಿ ಹಾಸನದ ವೈದ್ಯ ಡಾ ಸುರೇಶ್ ಪ್ರಭು ತಮ್ಮ ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಬಾರದೇ ವೈಮನಸ್ಸು ಉಂಟಾಗಿದ್ದರಿಂದ ಪತ್ನಿ ಭಾಗೀರಥಿಗೆ ವಿಚ್ಚೇದನ ನೀಡಲು ಬಯಸಿದ್ದ. ಆದರೆ, ಭಾಗೀರಥಿ ಇದಕ್ಕೆ ಒಪ್ಪಿರಲಿಲ್ಲ. ಹೀಗಾಗಿ ಆಕೆಯನ್ನು ಕೊಲೆ ಮಾಡಲು ತೀರ್ಮಾನಿಸಿದ್ದ ಸುರೇಶ್ ಪ್ರಭು, ತನ್ನ ಸ್ನೇಹಿತ ಮಂಜ ಅಲಿಯಾಸ್ ಮಂಜುನಾಥ್ಗೆ ವಿಷಯ ತಿಳಿಸಿದ್ದ.
ದೋಷಾರೋಪ ಪಟ್ಟಿಯಲ್ಲಿ ಇದ್ದಿದ್ದೇನು? :ಅಂತೆಯೇ, ಭಾಗೀರಥಿ ಕೊಲೆಗೆ 2010ರ ಜ.5ರಂದು ಹಾಸನದ ಜಿಲ್ಲಾ ಸ್ಟೇಡಿಯಂ ಬಳಿ ಸಂಚು ರೂಪಿಸಲಾಗಿತ್ತು. ಭಾಗೀರಥಿಗೆ ನಾಗರಹಾವಿನ ವಿಷವನ್ನು ಇಂಜೆಕ್ಷನ್ ಮೂಲಕ ಚುಚ್ಚಿ ಕೊಲೆ ಮಾಡಲು ನಿರ್ಧರಿಸಿ, ಆಕೆ ಹಾವು ಕಚ್ಚಿ ಮೃತಪಟ್ಟಿದ್ದಾಳೆಂದು ಎಲ್ಲರನ್ನೂ ನಂಬಿಸಬಹುದು ಯೋಜಿಸಿದ್ದರು.
ಈ ಸಂಚಿನ ಪ್ರಕಾರ ಮಂಜುನಾಥ್ ಹಾಗೂ ನಿರಂಜನ್ ರಾಜ್ ಅರಸ್ ಅಲಿಯಾಸ್ ಅಚ್ಚನಿ ಎಂಬಾತನ ಜೊತೆ ಸೇರಿ ಏಡ್ಸ್ ಹಾಗೂ ಕ್ಯಾನ್ಸರ್ ರೋಗಿಗಳ ಚಿಕಿತ್ಸೆ ಬಗ್ಗೆ ನಾಗರಹಾವಿನ ವಿಷ ಬೇಕಾಗಿದೆ ಎಂದು ತಮ್ಮ ಪರಿಚಯದ ಹಾವಾಡಿಗ ಕೇಶವ ಎಂಬಾತನ ಬಳಿ ಸುಳ್ಳು ಹೇಳಿದ್ದರು. ಅದರಂತೆ ಕೇಶವ ನಾಗರಹಾವಿನಿಂದ ವಿಷವನ್ನು ಕಕ್ಕಿಸಿ ತೆಗೆದು ನೀಡಿದ್ದ ಎಂದು ಆರೋಪಿಸಲಾಗಿತ್ತು.
ಇದನ್ನು ಕಾರ್ಯಗತಗೊಳಿಸಲು ಜ.6ರಂದು ಬೆಳಗ್ಗೆ ಮಂಜುನಾಥ್ ನೀಡಿದ್ದ ನಾಗರಹಾವಿನ ವಿಷದಲ್ಲಿ ಸ್ವಲ್ಪ ಒಂದು ಸಿರೀಂಜ್‌ಗೆ ಲೋಡ್ ಮಾಡಿ ತಾನೇ ಇಟ್ಟುಕೊಂಡು ಉಳಿದ ವಿಷವನ್ನು ಸಣ್ಣ ಬಾಟಲಿ ಹಾಗೂ ಇನ್ನೊಂದು ಸಿರಿಂಜ್ ಅನ್ನು ಮಂಜುನಾಥನಿಗೆ ನೀಡಿದ್ದ. ಜೊತೆಗೆ ಮಾರುತಿ 800 ಕಾರಿನಲ್ಲಿ ನಿರಂಜನ್ ರಾಜ್ ಅರಸ್, ಬಸವೇ ಗೌಡ, ಪರಮೇಶ ಅವರೊಂದಿಗೆ ಹಾಸನದಿಂದ ಚಿಕ್ಕಮಗಳೂರು ಮಾರ್ಗವಾಗಿ ಹೆಬ್ರಿ ಸಮೀಪದ ಸೋಮೇಶ್ವರಕ್ಕೆ ಕರೆದುಕೊಂಡು ಬಂದು ಕಾದು ನಿಲ್ಲುವಂತೆ ಸೂಚಿಸಿದ್ದರು.
ನಂತರ ಭಾಗೀರಥಿಗೆ ಸೋಮೇಶ್ವರದಿಂದ ಮಡಾಮಕ್ಕಿ ರಸ್ತೆಯ ನಿರ್ಜನ ಸ್ಥಳದಲ್ಲಿ ರಾತ್ರಿ ವೇಳೆ ನಾಗರಹಾವಿನ ವಿಷ ತುಂಬಿದ್ದ ಇಂಜೆಕ್ಷನ್ ಚುಚ್ಚಿ ಕೊಲೆ ಮಾಡಿದ್ದರು ಆರೋಪಿಸಲಾಗಿತ್ತು.
ಪತಿ ಸುರೇಶ್ ಪ್ರಭು ತಾನು ನಡೆಸಿದ ಕೊಲೆ ಕೃತ್ಯವು ಬೆಳಕಿಗೆ ಬರಬಾರದೆಂಬ ಉದ್ದೇಶದಿಂದ ಪತ್ನಿಗೆ ಯಾವುದೋ ವಿಷದ ಹಾವು ಕಚ್ಚಿದೆ ಎಂದು ಹೇಳಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಅಲ್ಲಿ ಆಕೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಖಚಿತ ಪಡಿಸಿದ್ದರು. ಬಳಿಕ ಯಾವುದೇ ಸಾಕ್ಷಿ, ಪುರಾವೆ ಸಿಗಬಾರದೆಂಬ ಉದ್ದೇಶದಿಂದ ಹೆಬ್ರಿ ಪೊಲೀಸ್ ಠಾಣೆಗೂ ಸ್ವತಃ ಸುರೇಶ್ ಪ್ರಭು ದೂರು ದಾಖಲಿಸಿದ್ದರು ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು.
ಪತಿ ಸುರೇಶ್ ಪ್ರಭು ಸೇರಿ 6 ಮಂದಿಯ ವಿರುದ್ದ 57 ಸಾಕ್ಷ್ಯಾಧಾರಗಳನ್ನು ಒಳಗೊಂಡ ಚಾರ್ಜ್‌ಶೀಟ್ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಆದರೆ, ಇದೀಗ ಆರೋಪಿಗಳ ವಿರುದ್ಧದ ದೋಷಾರೋಪಣೆ ಸಾಬೀತು ಪಡಿಸಲು ಸಾಧ್ಯವಾಗಿಲ್ಲ. ಆರೋಪಿಗಳ ಪರವಾಗಿ ಉಡುಪಿಯ ನ್ಯಾಯವಾದಿ ಎಂ.ಶಾಂತಾರಾಮ ಶೆಟ್ಟಿ ವಾದಿಸಿದ್ದರು.
ಇದನ್ನೂ ಓದಿ:ಪ್ರೀತಿ ಬಿಡದ ಮಗಳು... ಕೊಲೆಗೈದು ಶವದ ಮುಂದೆ ವಿಡಿಯೋ ಮಾಡಿ ತಂದೆ ಹೇಳಿದ್ದೇನು?