ಉಡುಪಿ: ಕೇದಾರೋತ್ಥಾನ ಬೇಸಾಯ ಅಭಿಯಾನದಲ್ಲಿ ಹಡಿಲು ಬಿದ್ದ ಭೂಮಿ ನಾಟಿ ಕಾರ್ಯಕ್ಕೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಕೆಸರುಗದ್ದೆಯಲ್ಲಿ ಟ್ರ್ಯಾಕ್ಟರ್ ಓಡಿಸುವ ಮೂಲಕ ಇಂದು ಚಾಲನೆ ನೀಡಿದರು.
ಉಡುಪಿಯಲ್ಲಿ ನಡೆದ ಕೇದಾರೋತ್ಥಾನ ಬೇಸಾಯ ಅಭಿಯಾನ ಹಡಿಲು ಬಿಟ್ಟ ಎರಡು ಸಾವಿರ ಎಕರೆ ಗದ್ದೆ ಬೇಸಾಯ ಕಾರ್ಯಕ್ರಮದಲ್ಲಿ ಸಚಿವರು ಭಾಗಿಯಾಗಿ ನಂತರ ಮಾತನಾಡಿದ ಅವರು, ನಾನು ಕೂಡ ರೈತನ ಮಗ ಬೇಸಾಯ ಮಾಡಿ ನನಗೆ ಅನುಭವವಿದೆ. ಹೋರಿಗಳ ಜೊತೆ ಉಳುಮೆ ಮಾಡಿದ್ದೇನೆ ಅಂತಾ ಹೇಳಿದರು. ಈ ವೇಳೆ ಕೃಷಿ ಸಚಿವರಿಗೆ ಶಾಸಕ ರಘುಪತಿ ಭಟ್ ಸಾಥ್ ನೀಡಿದ್ರು.
ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ದೆಹಲಿ ಪ್ರವಾಸ ವಿಚಾರದ ಕುರಿತು ಮಾತನಾಡಿದ ಅವರು, ಯೋಗೇಶ್ವರ್ ಪ್ರವಾಸದ ಬಗ್ಗೆ ನನಗೆ ಗೊತ್ತಿಲ್ಲ, ಯೋಗೇಶ್ವರ್ ಸಚಿವರಾಗಿರುವ ಕಾರಣ ದೆಹಲಿಗೆ ಹೋಗಿರಬಹುದು. ಅವರ ಪ್ರವಾಸದ ಕುರಿತು ನಾನು ಯಾಕೆ ಹೇಳಲಿ, ನಾನು ಕರಾವಳಿ ಪ್ರವಾಸ ಮಾಡುತ್ತಿದ್ದೇನೆ ಎಂದರು.
ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ. ಜಾರಕಿಹೊಳಿ ವಿರುದ್ಧ ಪಿತೂರಿ ಮಾಡಿ ಸಿಲುಕಿಸಲಾಯಿತು. ಪ್ರಕರಣದ ಸತ್ಯ ಸದ್ಯದಲ್ಲೇ ಹೊರಬರಲಿದೆ. ಜಾರಕಿಹೊಳಿಗೆ ಸೂಕ್ತ ಸ್ಥಾನಮಾನ ಸಿಗಲಿದೆ ಎಂದು ಹೇಳಿದರು.
23ರ ಚುನಾವಣೆಯಲ್ಲಿ ಬಿಜೆಪಿಗೆ ಜಯಭೇರಿ:
ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಈಗಾಗಲೇ ನಿರ್ನಾಮವಾಗಿದೆ. ನಾಟಿ ಮಾಡುವ ಮೊದಲು ಬೆಳೆ ತೆಗೆಯಲು ಸಾಧ್ಯವಿಲ್ಲ. 23ರ ಚುನಾವಣೆಯಲ್ಲಿ ಮೊದಲು ನೀವು ಗೆಲ್ಲಿ, ಆಮೇಲೆ ಸಿಎಂ ವಿಚಾರ ಮಾತನಾಡಿ. ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇದೆ. ಈಗಲೇ ಕುರ್ಚಿಗೆ ಕಿತ್ತಾಡುತ್ತಿದ್ದಾರೆ ಎಂದರೆ ಜನ ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್ ಹಡಿಲು ಭೂಮಿಯನ್ನು ಹಿಡಿದುಕೊಂಡು ಕನಸು ಕಾಣುತ್ತಿದೆ ಎಂದು ವ್ಯಾಂಗ್ಯವಾಡಿದರು.
ಮುಂದಿನ 2023 ರ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ. ಕಾಂಗ್ರೆಸ್ನಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯ ಮಾತ್ರ ಸಿಎಂ ಸ್ಪರ್ಧಿಗಳಲ್ಲ, ಜಿ. ಪರಮೇಶ್ವರ್ ಕೂಡ ಸಿಎಂ ಅಭ್ಯರ್ಥಿ. ಪರಮೇಶ್ವರ್ ಕೂಡ ಸಿಎಂ ಸ್ಥಾನಕ್ಕೆ ಸದ್ದಿಲ್ಲದೇ ತಯಾರಿ ನಡೆಸುತ್ತಿದ್ದಾರೆ. ಎಲ್ಲರೂ ಸಿಎಂ ಸ್ಥಾನಕ್ಕೆ ಸ್ಪರ್ಧೆ ಮಾಡುವುದು ತಪ್ಪಲ್ಲ. ಕೂಸು ಹುಟ್ಟುವ ಮೊದಲು ತೊಟ್ಟಿಲು ಕಟ್ಟಿ ತೂಗಿದ್ರೆ ಹೇಗೆ?. ರಾಜ್ಯದ ಪ್ರತಿಯೊಬ್ಬ ಶಾಸಕ ಕೂಡ ಸಿಎಂ ಆಗಲು ಅರ್ಹ. ಬಹುಮತವಿದ್ರೆ ಆ ಪಕ್ಷದ ಯಾವ ಶಾಸಕರು ಕೂಡ ಸಿಎಂ ಆಗಬಹುದು ಎಂದು ಹೇಳಿದರು.