ಉಡುಪಿ:ದೇವಸ್ಥಾನಲ್ಲಿ ಜಾತ್ರೆ ಅಂದರೆ ಅಲ್ಲಿ ಹಿಂದೂ ಧರ್ಮದ ಭಕ್ತರ ದಂಡೇ ಇರುತ್ತದೆ. ಮಸೀದಿಯಲ್ಲಿ ಉರೂಸ್ ಆದರೆ ಸಾವಿರಾರು ಮುಸ್ಲಿಮರು ಜಮಾಯಿಸುತ್ತಾರೆ. ಆದರೆ, ಉಡುಪಿಯ ಕಾರ್ಕಳದಲ್ಲಿರುವ ಚರ್ಚ್ನಲ್ಲಿ ನಡೆಯುವ ವರ್ಷಾವಧಿ ಸಾಂತ್ ಮಾರಿ ಜಾತ್ರೆಗೆ ಕ್ರಿಶ್ಚಿಯನ್ನರಿಗಿಂತ ಹಿಂದೂ- ಮುಸ್ಲಿಂ ಸಮುದಾಯದವರೇ ಹೆಚ್ಚಾಗಿ ಸೇರುತ್ತಾರೆ.
ಸಾಂತ್ ಮಾರಿ ಜಾತ್ರೆಯ ವೇಳೆ ಕ್ಯಾಂಡಲ್ ಬೆಳಗುತ್ತಿರುವ ಭಕ್ತರು ಕಾರ್ಕಳ ತಾಲೂಕಿನ ಅತ್ತೂರು ಚರ್ಚ್ನಲ್ಲಿ ವರ್ಷಕ್ಕೊಮ್ಮೆ ವೈಭವದ ಸಾಂತ್ ಮಾರಿ(ವಾರ್ಷಿಕ ಜಾತ್ರೆ) ಜಾತ್ರೆ ನಡೆಯುತ್ತದೆ. ದಕ್ಷಿಣ ಭಾರತದ ಪ್ರಸಿದ್ಧ ಕ್ರೈಸ್ತರ ಇಗರ್ಜಿ ಇದು. ದೇಶದ 21ನೇ ಮೈನರ್ ಬೆಸಲಿಕಾ ಎಂಬುದಾಗಿ ಪೋಪ್ನಿಂದ ಘೋಷಣೆಯಾದ ಅತ್ತೂರು ಸೈಂಟ್ ಲಾರೆನ್ಸ್ ಪುಣ್ಯ ಕ್ಷೇತ್ರ, ಪವಾಡ ಕ್ಷೇತ್ರ ಎಂದೂ ಕೂಡಾ ಹೆಸರು ಪಡೆದಿದೆ.
ಅತ್ತೂರು ಸಾಂತ್ ಮಾರಿ ಜಾತ್ರೆ ವೈಭವ ಹಿಂದೂ ದೇವಾಲಯದಂತೆ ಇಲ್ಲೂ ಪುಷ್ಕರಣಿ ಇದೆ. ಇಲ್ಲಿನ ಆರಾಧ್ಯ ದೈವ ಸಂತ ಲಾರೆನ್ಸ್ ಸಂತಾನಭಾಗ್ಯ, ಸೇರಿದಂತೆ ಇಷ್ಟಾರ್ಥಗಳನ್ನು ಈಡೇರಿಸುವ ದೇವ ಮಾನವ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅದಕ್ಕಾಗಿ ವಿವಿಧ ಗಾತ್ರದ ಕ್ಯಾಂಡಲ್ಗಳನ್ನು ತಂದು ಜನರು ತಮ್ಮ ಬೇಡಿಕೆಗಳನ್ನು ದೇವರ ಮುಂದಿಡುತ್ತಾರೆ. ಇಲ್ಲಿ ಕ್ಯಾಂಡಲ್ ಹಚ್ಚಿ ಬೇಡಿಕೊಂಡರೆ ಇಷ್ಟಾರ್ಥ ಸಿದ್ದಿಯಾಗುತ್ತದೆ ಎಂಬ ನಂಬಿಕೆ ಇಲ್ಲಿವರೆಗೂ ಸುಳ್ಳಾಗಿಲ್ಲಂತೆ.
ಅತ್ತೂರು ಸಾಂತ್ ಮಾರಿ ಜಾತ್ರೆ ಸಡಗರ ಸುಮಾರು ಐದು ದಿನಗಳ ಕಾಲ ಸಾಂತ್ ಮಾರಿ ಜಾತ್ರೆ ನಡೆಯಲಿದೆ. ಅಷ್ಟೂ ದಿನವೂ 50ಕ್ಕೂ ಹೆಚ್ಚು ಬಲಿ ಪೂಜೆಗಳು ಇಲ್ಲಿ ನಡೆಯುತ್ತವೆ. ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಗೆ ಜಾತಿ,ಬೇಧ ಮರೆತು ಮೂಲೆ ಮೂಲೆಗಳಿಂದ ಲಕ್ಷಾಂತರ ಮಂದಿ ಭಾಗವಹಿಸುತ್ತಾರೆ. ಅದರಲ್ಲೂ ಜಾತ್ರೆಯಲ್ಲಿ ಶೆ.70ರಷ್ಟು ಅನ್ಯ ಜಾತಿ, ಧರ್ಮದ ಜನರು ಪಾಲ್ಗೊಳ್ಳುವುದು ವಿಶೇಷ.