ಉಡುಪಿ : ಸಕ್ಕರೆ ಕಾರ್ಖಾನೆ ಮುಚ್ಚಿದರೆ ಎಲ್ಲರೂ ಸರ್ಕಾರದ ಮೊರೆ ಹೋಗ್ತಾರೆ. ಆದರೆ, ಉಡುಪಿಯಲ್ಲಿ ಮಾತ್ರ ಮುಚ್ಚಿದ ಕಾರ್ಖಾನೆಯ ಆಡಳಿತ ಮಂಡಳಿಯವರು ದೇವರ ಮೊರೆ ಹೋಗಿದ್ದಾರೆ.
ಹೌದು, ಏನೇ ಪ್ರಯತ್ನ ಮಾಡಿದರೂ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯನ್ನು ಪುನರುತ್ಥಾನ ಮಾಡಲು ಸಾಧ್ಯವಾಗುತ್ತಿಲ್ಲ. ಸರ್ಕಾರದಿಂದ ಅನುದಾನವೂ ಬರುತ್ತಿಲ್ಲ, ರೈತರು ಕಬ್ಬು ಬೆಳೆಯುತ್ತಿಲ್ಲ. ತುಕ್ಕು ಹಿಡಿದು ಕಾರ್ಖಾನೆ ಕುಸಿಯುವ ಹಂತ ತಲುಪಿದೆ. ಹೀಗಾಗಿ, ದೈವದ ಶಾಪ ಮತ್ತು ದೇವರ ಅವಕೃಪೆಯಿಂದಲೇ ಹೀಗಾಗಿದೆ ಎಂದು ಭಾವಿಸಿರುವ ನೂತನ ಆಡಳಿತ ಮಂಡಳಿಯವರು, ಕೇರಳದ ಪ್ರಸಿದ್ಧ ತಂತ್ರಿಗಳನ್ನು ಕರೆದು ಆರೂಢ ಪ್ರಶ್ನೆ ಇಟ್ಟಿದ್ದಾರೆ. ಈ ಪ್ರಶ್ನಾಚಿಂತನೆಯಲ್ಲಿ ಅನೇಕ ದೋಷಗಳು ಕಂಡು ಬಂದಿದ್ದು, ಶಾಪಗ್ರಸ್ತ ಭೂಮಿಯಲ್ಲಿ ದೈವದ ಸಾನಿಧ್ಯವು ಪತ್ತೆಯಾಗಿದೆ. ದೇವರು ಮತ್ತು ದೈವಕ್ಕೆ ಭಕ್ತಿ ತೋರಿಸಿ ಮುನ್ನಡೆದರೆ ಕಾರ್ಖಾನೆ ಮತ್ತೆ ಆರಂಭವಾಗುತ್ತದೆ ಎಂಬ ಭರವಸೆ ಆರೂಢ ಪ್ರಶ್ನೆಯಲ್ಲಿ ಕಂಡು ಬಂದಿದೆ.