ಉಡುಪಿ: ನಗರವಾಸಿಗಳು ಹೆಚ್ಚಾಗಿ ಅವಲಂಬಿಸಿರುವುದು ಸ್ವರ್ಣಾ ನದಿಯನ್ನು. ಆದರೆ ಇದೇ ಸ್ವರ್ಣಾ ನದಿ ನೀರಿನಲ್ಲಿ ಆ್ಯಂಟಿಬಯೋಟಿಕ್ ಅಂಶ ಇರುವುದರಿಂದ ಮನುಷ್ಯರಿಗೂ, ಜಲಚರಗಳಿಗೂ ಭವಿಷ್ಯದಲ್ಲಿ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ತಜ್ಜರು ಎಚ್ಚರಿಕೆ ನೀಡಿದ್ದಾರೆ. ಹಾಗಾದ್ರೆ ಪ್ರಕೃತಿ ದತ್ತವಾದ ನದಿಗೆ ಆ್ಯಂಟಿಬಯೋಟಿಕ್ ಸೇರಿಕೊಂಡಿದ್ದು ಹೇಗೆ ಅಂತೀರಾ ಈ ಸ್ಟೋರಿ ನೋಡಿ..
ಸ್ವರ್ಣಾ, ಕೃಷ್ಣನೂರು ಉಡುಪಿಯ ಜನರ ಜೀವ ನದಿ, ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಪಶ್ಚಿಮಕ್ಕೆ ಮೈದುಂಬಿ ಹರಿದು ಅರಬ್ಬೀ ಸಮುದ್ರದ ಒಡಲು ಸೇರುವ ಈ ನದಿಯೇ ನಗರವಾಸಿಗಳಿಗೆ ಆಧಾರ. ಆದ್ರೀಗ ವರ್ಷಪೂರ್ತಿ ನಗರವಾಸಿಗಳಿಗೆ ನೀರು ಒದಗಿಸುವ ಸ್ವರ್ಣಾ ನೀರಿನಲ್ಲಿ ವಿವಿಧ ರೀತಿಯ ಆ್ಯಂಟಿಬಯೋಟಿಕ್ ಅಂಶಗಳು ಪತ್ತೆಯಾಗಿರುವುದು ತಜ್ಞರ ವರದಿಯಿಂದ ಬೆಳಕಿಗೆ ಬಂದಿದೆ.
ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಭೂ ವಿಜ್ಞಾನ ಪ್ರಾಧ್ಯಾಪಕ ಪ್ರೊ. ಬಾಲಕೃಷ್ಣ ನೇತೃತ್ವದ ತಂಡ ಕಳೆದ ಎಂಟು ವರ್ಷಗಳಿಂದ ಅಧ್ಯಯನ ನಡೆಸಿದೆ. ಈ ವರದಿಯಲ್ಲಿ ಮನುಷ್ಯರಿಗೆ ಹಾಗೂ ಜಲಚರಗಳಿಗೆ ದೀರ್ಘಾವಧಿಯಲ್ಲಿ ಅಪಾಯ ಉಂಟಾಗುವ ಟ್ರೈಮೆಥೋಪ್ರಿಂ, ಸಲ್ಫಾಮಿತೋಕ್ಸಾಜೋಲ್, ಕ್ಲೋರಾಮ್ ಫೆನಿಕಾಲ್ ಸೆಫ್ಟ್ರಿಯಾಕ್ಸೋನ್, ನೆಪ್ರಾಕ್ಸಿನ್ ಎಂಬ ವಿವಿಧ ರೀತಿಯ ಆ್ಯಂಟಿಬಯೋಟಿಕ್ ಅಂಶಗಳು ಸ್ವರ್ಣಾ ನದಿ ನೀರಿನಲ್ಲಿ ಸೇರಿಕೊಂಡಿದೆ ಅಂತ ವರದಿಯಲ್ಲಿ ತಿಳಿಸಿದ್ದಾರೆ.