ಕರ್ನಾಟಕ

karnataka

ETV Bharat / state

ಆಸ್ಪತ್ರೆ ಎಡವಟ್ಟಿಗೆ ಬಲಿಯಾಯ್ತಾ ಬಡಜೀವ? ಉಡುಪಿಯಲ್ಲಿ ಹೀಗೊಂದು ಆರೋಪ!

ಉಡುಪಿ ಮಹಿಳೆಯೊಬ್ಬರ ಸಾವು ಇದೀಗ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಖಾಸಗಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆ ಮೃತಪಟ್ಟಿದ್ದಾರೆ ಎಂದು ಮನೆಯವರು ಆರೋಪಿಸಿದ್ದಾರೆ.

Shriraksha
ಶ್ರೀರಕ್ಷ

By

Published : Aug 22, 2020, 4:00 PM IST

ಉಡುಪಿ: ಕೊರೊನಾದಿಂದ ಮೃತಪಟ್ಟಿದ್ದಾರೆ ಎನ್ನಲಾದ ಉಡುಪಿಯ ಮಹಿಳೆಯೊಬ್ಬರ ಸಾವು ಇದೀಗ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ವೈದ್ಯರ ನಿರ್ಲಕ್ಷ್ಯದಿಂದ ಆದ ಸಾವನ್ನು ಕೊರೊನಾ ಕಾರಣ ಕೊಟ್ಟು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಮನೆಯವರು ಆರೋಪಿಸಿದ್ದಾರೆ.

ಉಡುಪಿಯ ಕುಕ್ಕಿಕಟ್ಟೆ ನಿವಾಸಿಯಾಗಿರುವ ಶ್ರೀರಕ್ಷ, ತಲೆನೋವು ಎಂಬ ಕಾರಣಕ್ಕೆ ಉಡುಪಿ ನಗರದಲ್ಲಿರುವ ಖಾಸಗಿ ಆಸ್ಪತ್ರೆಯೊಂದಕ್ಕೆ ನಿನ್ನೆ ಬೆಳಗ್ಗೆ ಚಿಕಿತ್ಸೆಗಾಗಿ ತೆರಳಿದ್ದರು. ಪರೀಕ್ಷೆ ಮಾಡಿದ ವೈದ್ಯರು ಇವರಿಗೊಂದು ಇಂಜೆಕ್ಷನ್ ಚುಚ್ಚಿ ಮನೆಗೆ ಹೋಗಿ ರೆಸ್ಟ್ ಮಾಡಿ ಸರಿಯಾಗುತ್ತದೆ ಎಂದು ಕಳುಹಿಸಿದ್ದಾರೆ. ಮನೆಗೆ ಬಂದು ವಿಶ್ರಾಂತಿಗಾಗಿ ಮಲಗಿದ ಶ್ರೀರಕ್ಷಾ ಅವರನ್ನು ಮಧ್ಯಾಹ್ನದ ಹೊತ್ತು ಅವರ ಮಕ್ಕಳು ಎಬ್ಬಿಸಿದಾಗ ಶ್ರೀ ರಕ್ಷಾ ಮಿಸುಕಾಡಲೇ ಇಲ್ಲ. ವಿಶ್ರಾಂತಿಗಾಗಿ ಮಲಗಿದ ಶ್ರೀರಕ್ಷಾ ಅವರು ಅದಾಗಲೇ ಚಿರನಿದ್ರೆಗೆ ಜಾರಿದ್ದರು. ಕೂಡಲೇ ಅವರನ್ನು ಮತ್ತೊಂದು ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅದಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.

26 ವರ್ಷ ಅಂದ್ರೆ ಅದೇನು ಸಾಯೋ ವಯಸ್ಸಾ? ಯಕಶ್ಚಿತ್ ಒಂದು ತಲೆನೋವಿನಿಂದ ಜೀವ ಹೋಗೋದಕ್ಕೆ ಸಾಧ್ಯಾನಾ? ಅಥವಾ ವೈದ್ಯರು ಕೊಟ್ಟ ಔಷಧಿಯೇ ಈ ಮಹಿಳೆಯ ಪ್ರಾಣ ತೆಗಿಯಿತಾ? ಈ ರೀತಿಯ ಹತ್ತು ಹಲವು ಪ್ರಶ್ನೆಗಳು ಶ್ರೀರಕ್ಷಾ ಅವರ ಮನೆಯವರನ್ನು ಕಾಡುತ್ತಿದೆ. ಈ ನಡುವೆ ಶವಸಂಸ್ಕಾರಕ್ಕೂ ಮೊದಲು ಕೊರೊನಾ ಪರೀಕ್ಷೆ ನಡೆಸುವ ಉದ್ದೇಶದಿಂದ ಇವರ ಗಂಟಲ ದ್ರವವನ್ನು ತೆಗೆಯಲಾಗಿದೆ. ಮೊದಲ ರ‍್ಯಾಪಿಡ್ ಪರೀಕ್ಷೆಯಲ್ಲಿ ಕೊರೊನಾ ನೆಗೆಟಿವ್ ಎಂದು ಬಂದಿತ್ತು. ಆದರೆ, ಖಾಸಗಿ ಆಸ್ಪತ್ರೆ ಮೇಲೆ ಕುಟುಂಬಸ್ಥರು ನಿರ್ಲಕ್ಷ್ಯದ ಆರೋಪ ಮಾಡಿದ ತಕ್ಷಣ, ಮತ್ತೊಂದು ವರದಿ ಪಾಸಿಟಿವ್ ಆಗಿ ಬದಲಾಗಿದೆ.

ಆಸ್ಪತ್ರೆಯ ನಿರ್ಲಕ್ಷ್ಯ ಆರೋಪ

ಶ್ರೀರಕ್ಷ ಅವರ ಪತಿ ಬಿಜೆಪಿ ಸಕ್ರಿಯ ಕಾರ್ಯಕರ್ತರಾಗಿದ್ದು, ಈ ಘಟನೆಯ ಬಗ್ಗೆ ಕೂಲಂಕಷವಾದ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ. ತಲೆನೋವಿಗೆ ಕಾರಣ ಏನೆಂದು ಸರಿಯಾಗಿ ತಿಳಿಯದೇ ಆಸ್ಪತ್ರೆಯಲ್ಲಿ ಇಂಜೆಕ್ಷನ್ ನೀಡಿದ್ದಾರೆ. ಶ್ರೀರಕ್ಷ ಅವರಿಗೆ ಯಾವ ವೈದ್ಯರು ಚಿಕಿತ್ಸೆ ನೀಡಿದ್ದಾರೆ ಎನ್ನುವ ಬಗ್ಗೆ ಆಸ್ಪತ್ರೆಯವರಿಗೇ ಗೊಂದಲವಿದೆ. ತಮ್ಮ ತಪ್ಪನ್ನು ಮುಚ್ಚಿಡಲು ಕೊರೊನಾ ಬಂದು ಮೃತಪಟ್ಟಿದ್ದಾರೆ ಎಂದು ಕಥೆ ಹೆಣೆಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಯನ್ನು ಉಳಿಸಲು ಪೊಲೀಸರು ಮತ್ತು ಜಿಲ್ಲಾಡಳಿತ ಕೂಡ ತೆರೆಮರೆಯಲ್ಲಿ ಕೆಲಸ ಮಾಡುತ್ತಿದೆ ಎಂದು ನಗರಸಭಾ ಸದಸ್ಯ ರಮೇಶ್ ಕಾಂಚನ್ ಆರೋಪಿಸಿದ್ದಾರೆ.

ಒಟ್ಟಿನಲ್ಲಿ ಇದು ವೈದ್ಯರ ನಿರ್ಲಕ್ಷ್ಯವೋ ಅಥವಾ ವಿಧಿಯ ಆಟವೋ ತನಿಖೆಯಿಂದಷ್ಟೇ ಬಹಿರಂಗವಾಗಬೇಕು. ಆದರೆ, ಎರಡು ಪುಟ್ಟ ಕಂದಮ್ಮಗಳು ತಮ್ಮ ತಾಯಿಯನ್ನು ಕಳೆದುಕೊಂಡು ತಬ್ಬಲಿಗಳಾಗಿವೆ. ಸರ್ಕಾರಿ ಆಸ್ಪತ್ರೆ ನೀಡಿರುವ ಕೊರೊನಾ ತಪಾಸಣಾ ವರದಿಯಲ್ಲಿಯೂ ಹಲವಾರು ದೋಷಗಳು ಕಂಡುಬಂದಿದ್ದು, ಜನರ ಅನುಮಾನ ಹೆಚ್ಚಲು ಕಾರಣವಾಗಿದೆ.

ABOUT THE AUTHOR

...view details